ಚೆಟ್ಟಳ್ಳಿ, ಸೆ. ೨೪: ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿಯ ಕಾಮಗಾರಿಯೊಂದು ನಡೆಯದೆಯೇ ಬಿಲ್ ಪಡೆದಿದ್ದ ಪ್ರಸಂಗವೊAದು ಬೆಳಕಿಗೆ ಬಂದಿದೆ. ೨೦೧೮ರಲ್ಲಿ ಭೂಕುಸಿತ ಹಾಗೂ ನೆರೆಯ ಸಂದರ್ಭದಲ್ಲಿ ಮನೆಯನ್ನು ಕಳೆದುಕೊಂಡಿದ್ದ ಸಿದ್ದಾಪುರ ನೆಲ್ಲಿಹುದಿಕೇರಿ ವ್ಯಾಪ್ತಿಯ ನಿರಾಶ್ರಿತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ವಾಲ್ನೂರು ಪಂಚಾಯಿತಿಗೆ ಒಳಪಟ್ಟ ಬಳಂಜಿಗೆರೆ ಗ್ರಾಮದ ಟಾಟಾ ಕಾಫಿ ಸಂಸ್ಥೆಯೊಳಗೆ ಪೈಸಾರಿ ಜಾಗವೊಂದನ್ನು ಆಗಿನ ಜಿಲ್ಲಾಡಳಿತ ಗುರುತಿಸಿ ಅದನ್ನು ನಿವೇಶನವಾಗಿ ಪರಿವರ್ತಿಸಲು ನಿರ್ಧರಿಸಿತ್ತು.

ಕಾಡನ್ನು ಕಡಿದು ರಸ್ತೆ ನಿರ್ಮಿಸುವುದಕ್ಕೆ ಸೋಮವಾರಪೇಟೆಯ ಗುತ್ತಿಗೆದಾರರೊಬ್ಬರಿಗೆ ೮ ಲಕ್ಷಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ಟಾಟಾ ಸಂಸ್ಥೆಯ ಹಳೆಯ ರಸ್ತೆಯನ್ನು ಉಪಯೋಗಿಸಿ ಕಾಡನ್ನು ಮಾತ್ರ ಕಡಿಯುವ ಮುಖಾಂತರ ಹಣವನ್ನು ಮಂಜೂರು ಮಾಡಿಕೊಂಡಿದ್ದನು.

ಕಾಮಗಾರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನಿತಾ ಮಂಜುನಾಥ್ ಅವರು ಮಾಹಿತಿ ಹಕ್ಕಿನ ಮುಖಾಂತರ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ಹಕ್ಕಿನ ಪ್ರಕಾರ ಕಳೆದ ಮಾರ್ಚ್ ತಿಂಗಳಲ್ಲಿ ಗುತ್ತಿಗೆದಾರನಿಗೆ ಪೂರ್ತಿ ಕಾಮಗಾರಿಯ ಹಣ ಸಂದಾಯವಾಗಿರುವುದಾಗಿ ತಿಳಿಸಲಾಗಿದ್ದು, ಸ್ಥಳಕ್ಕೆ ಹೋಗಿ ಕಾಮಗಾರಿ ಪರಿಶೀಲಿಸಿದಾಗ ಕಾಮಗಾರಿ ನಡೆಯದಿರುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಸುನಿತಾ ಮಂಜುನಾಥ್ ಅವರು ಜಿಲ್ಲಾ ಪಂಚಾಯಿತಿ ಸಿ.ಇ.ಓ. ಅವರಿಗೆ ದೂರನ್ನು ಸಲ್ಲಿಸಿದ್ದಾರೆ.

ದೂರು ಸಲ್ಲಿಸಿದ ಬಗ್ಗೆ ತಿಳಿದ ಗುತ್ತಿಗೆದಾರನು ಕಾಮಗಾರಿಯನ್ನು ಬಿರುಸಿನಿಂದ ನಡೆಸುತ್ತಿರುವುದು ಕಂಡು ಬಂದಿದೆ. ಇದರ ಬಗ್ಗೆ ಸೂಕ್ತ ತನಿಖೆ ಮಾಡಿ ಈ ರೀತಿಯ ಇನ್ನಷ್ಟು ಹಗರಣಗಳನ್ನು ಬಯಲಿಗೆ ತರಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

-ಪಪ್ಪು ತಿಮ್ಮಯ್ಯ, ಪುತ್ತರೀರ