ಸೋಮವಾರಪೇಟೆ, ಸೆ. ೨೪: ಇಲ್ಲಿನ ಟೀಂ ೧೨ ವತಿಯಿಂದ ಆಯೋಜಿಸಿದ್ದ ಆಫ್ ರೋಡ್ ರ‍್ಯಾಲಿಯಲ್ಲಿ ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ನೂರಾರು ಸ್ಪರ್ಧಿಗಳು ಭಾಗವಹಿಸಿ ಸಾಹಸಮಯ ಚಾಲನೆಯ ಅನುಭವ ಪಡೆದರು.

ಕಳೆದ ಎರಡು ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ಅಡ್ವೆಂಚರ್ ಆಫ್ ರೋಡ್ ರ‍್ಯಾಲಿ ಯಶಸ್ವಿಯಾದ ಹಿನ್ನೆಲೆ ಈ ಬಾರಿಯೂ ಮೂರನೇ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೊಡಗಿನ ವಿವಿಧ ಭಾಗಗಳ ಚಾಲಕರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ದೆಹಲಿ, ಮಹಾರಾಷ್ಟರ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಪಂಜಾಬ್ ಸೇರಿದಂತೆ ಇತರ ರಾಜ್ಯಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದರು.

ಬೆಳಿಗ್ಗೆ ಮಸಗೋಡು ಗ್ರಾಮದ ಶ್ರೀ ಸಿದ್ದೇಶ್ವರ ಕನ್ವೆನ್‌ಷನ್ ಸಭಾಂಗಣದಲ್ಲಿ ರ‍್ಯಾಲಿಗೆ ಚಾಲನೆ ನೀಡಲಾಯಿತು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಸಾಹಸಮಯ ಕ್ರೀಡೆಗಳು ನಮ್ಮನ್ನು ದೈಹಿಕ ಹಾಗೂ ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ. ಎಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಎದುರಿಸಿ ಬರುವ ಶಕ್ತಿಯನ್ನು ತುಂಬುತ್ತದೆ ಎಂದರು.

ಈ ಸಂದರ್ಭ ಟೀಂ ೧೨ನ ಪ್ರಮುಖರಾದ ಹರಪಳ್ಳಿ ರವೀಂದ್ರ, ಪಿ.ಕೆ. ರವಿ, ಅರುಣ್ ಕಾಳಪ್ಪ, ಎಂ.ಡಿ. ಲಿಖಿತ್, ಗಿರೀಶ್ ಮಲ್ಲಪ್ಪ, ಪ್ರೀತಂ ಪುರಂದರ, ಉದಯ್, ದರ್ಶನ್, ಪ್ರೇಮ್‌ಸಾಗರ್, ಕೆ.ಡಿ. ಕುಮಾರ್, ಮಂಜೂರು ತಮ್ಮಣ್ಣಿ, ಎಂ.ಪಿ.ರವಿ, ಅಂಕುಶ್, ಪ್ರಸಾದ್, ಅಭಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಂತರ ತಾಲೂಕಿನ ಮಲ್ಲಳ್ಳಿ, ಕುಡಿಗಾಣ, ಕೊತ್ನಳ್ಳಿ ಭಾಗಗಳಲ್ಲಿ ಆಫ್ ರೋಡ್ ರ‍್ಯಾಲಿ ತೆರಳಿತು. ಗ್ರಾಮೀಣ ಭಾಗದ ಮಂದಿ ಸಾಹಸಮಯ ಚಾಲನೆಯನ್ನು ಸಂಭ್ರಮಿಸಿದರು. ಹಲವಷ್ಟು ಕುಗ್ರಾಮಗಳ ಕಾಫಿ, ಏಲಕ್ಕಿ ತೋಟದ ಬೆಟ್ಟ ಗುಡ್ಡಗಳ ನಡುವೆ ಸಾಹಸಮಯ ಚಾಲನೆ ನಡೆಯಿತು. ಚಾಲಕರು ಅತ್ಯುತ್ಸಾಹದಿಂದ ರ‍್ಯಾಲಿಯಲ್ಲಿ ಭಾಗಿಯಾಗಿದ್ದರು.