ಬೆಂಗಳೂರು, ಸೆ. ೨೪: ಕಾವೇರಿ ನದಿ ನೀರಿನ ಹೋರಾಟ ಮಂಡ್ಯ, ಮೈಸೂರು, ಬೆಂಗಳೂರು ನಂತರ ಇಡೀ ಕರ್ನಾಟಕದಾದ್ಯಂತ ವ್ಯಾಪಿಸುತ್ತಿದೆ. ತಾ. ೨೬ ರಂದು ಬೆಂಗಳೂರು ಬಂದ್ಗೆ ಕರೆ ನೀಡಿದ್ದರೆ ತಾ. ೨೯ ರಂದು ಅಖಂಡ ಕರ್ನಾಟಕ ಬಂದ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಕನ್ನಡ ಒಕ್ಕೂಟ ಮಾಡುತ್ತಿರುವ ಬಂದ್. ಹೀಗಾಗಿ ಅಖಂಡ ಕರ್ನಾಟಕ ಬಂದ್ ಇರಲಿದೆ. ತಾ. ೨೯ ರಂದು ಅಖಂಡ ಕರ್ನಾಟಕ ಬಂದ್ ಗೆ ಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.
ಸೋಮವಾರ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಸಂಪೂರ್ಣ ತೀರ್ಮಾನಕ್ಕೆ ಬರುತ್ತೇವೆ. ತಾ. ೨೯ರಂದು ಕನ್ನಡ ಒಕ್ಕೂಟದ ಆಶ್ರಯದಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಸಾಹಿತಿಗಳು, ವ್ಯಾಪಾರಿಗಳು ಎಲ್ಲರೂ ಇದಕ್ಕೆ ಬೆಂಬಲ ನೀಡಿ ಸಹಕರಿಸಬೇಕು ಎಂದಿದ್ದಾರೆ.