ಸಿದ್ದಾಪುರ, ಸೆ. ೨೩: ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಒಳಪಡುವ ಬಾಡಗ-ಬಾಣಂಗಾಲ ವ್ಯಾಪ್ತಿಯ ತೂಬನಕೊಲ್ಲಿ ಸಮೀಪದಲ್ಲಿನ ಮುಖ್ಯ ರಸ್ತೆಯಲ್ಲಿರುವ ಕಿರು ಸೇತುವೆ ಮಧ್ಯೆ ಬೃಹದಾಕಾರದ ಗುಂಡಿ ಕಾಣಿಸಿಕೊಂಡಿದ್ದು ಸೇತುವೆ ಕುಸಿಯುವ ಭೀತಿ ಎದುರಾಗಿದೆ. ಈ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಮಿಕರು ವಾಸವಿದ್ದು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಇದೇ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ತೋಟದ ಕಾರ್ಮಿಕರ ವಾಹನಗಳು, ಶಾಲಾ ವಿದ್ಯಾರ್ಥಿಗಳ ಬಸ್ ಸಂಚರಿಸುತ್ತಿದ್ದು ಸೇತುವೆಯನ್ನು ದುರಸ್ತಿ ಮಾಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಈ ವ್ಯಾಪ್ತಿಯ ಹದಗೆಟ್ಟ ರಸ್ತೆಯ ಗುಂಡಿಗಳನ್ನು ಬಿಬಿಟಿಸಿ ಸಂಸ್ಥೆಯ ಕಾರ್ಮಿಕರು ಮಣ್ಣು ಹಾಕಿ ಮುಚ್ಚುತ್ತಿದ್ದರು. ಇದೀಗ ಸೇತುವೆಯು ಗುಂಡಿಬಿದ್ದು ಕುಸಿಯುವ ಹಂತಕ್ಕೆ ತಲುಪಿದ್ದು ಗ್ರಾಮದ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದ್ದು, ಗುಂಡಿಬಿದ್ದ ಸೇತುವೆಯ ದುರಸ್ತಿಗೆ ಹಲವಾರು ಬಾರಿ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-ವಾಸು ಎ.ಎನ್.