ಗೋಣಿಕೊಪ್ಪಲು, ಸೆ. ೨೩: ಜನೋತ್ಸವ ಎಂದೇ ಪ್ರಸಿದ್ಧಿ ಪಡೆದಿರುವ ಗೋಣಿಕೊಪ್ಪ ದಸರಾದ ಸಮಿತಿಯ ಮೊದಲ ಸಭೆಯಲ್ಲಿಯೇ ಅತೃಪ್ತಿ, ಅಸಮಾಧಾನಗಳು ಕೇಳಿಬಂದಿದ್ದು, ದಶಮಂಟಪ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ ಆಯೋಜನೆಗೊಳ್ಳುವ ಗೋಣಿಕೊಪ್ಪ ದಸರಾ ತನ್ನದೇ ಆದ ಐತಿಹ್ಯ ಹೊಂದಿದೆ. ಇಂದು ಶ್ರೀ ಕಾವೇರಿ ದಸರಾ ಸಮಿತಿಯ ಸಭೆಯು ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಇದಕ್ಕೆ ಪತ್ರಕರ್ತರು, ಕೆಲ ಗ್ರಾ.ಪಂ. ಸದಸ್ಯರನ್ನು ಹಾಗೂ ಪ್ರಮುಖರನ್ನು ಆಹ್ವಾನಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ದಸರಾ ಸಮಿತಿಯ ನಡೆಯನ್ನು ಹಲವರು ಖಂಡಿಸಿದ್ದಾರೆ.

ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಗ್ರಾ.ಪಂ. ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಅವರ ಅಧ್ಯಕ್ಷತೆಯಲ್ಲಿ ದಸರಾ ಸಮಿತಿಯ ಮೊದಲ ಸಭೆಯು ಆಯೋಜನೆಗೊಂಡಿತ್ತು.

ಸಭೆಯಲ್ಲಿ ತರಾತುರಿಯಲ್ಲಿ ದಶಮಂಟಪ ಸಮಿತಿ ಅಧ್ಯಕ್ಷರನ್ನು ಆಯ್ಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಈ ವೇಳೆ ನವಚೇತನ ದಸರಾ ಸಮಿತಿಯ ಸದಸ್ಯ ಮುರುಗ, ನಾಡಹಬ್ಬ ದಸರಾ ಸಮಿತಿಯ ಸಂಚಾಲಕ ಪ್ರಭಾಕರ್ ನೆಲ್ಲಿತ್ತಾಯ, ಯುವ ದಸರಾ ಸಮಿತಿಯ ಮಾಜಿ ಅಧ್ಯಕ್ಷ ಕೆ.ರಾಜೇಶ್ ಹಾಗೂ ಸರ್ವರ ದಸರಾ ಸಮಿತಿಯ ಅಧ್ಯಕ್ಷ ಪರಶುರಾಮ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲಾ ಮಂಟಪ ಸಮಿತಿಯವರನ್ನು ಕರೆಸಿ ಒಮ್ಮತದಿಂದ ಆಯ್ಕೆ ನಡೆಸಬೇಕು ಎಂದು ಒತ್ತಾಯಿಸಿದ ಹಿನ್ನೆಲೆ ತಾ. ೨೪ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ವಿಶೇಷ ಸಭೆ ಕರೆದು ಎಲ್ಲಾ ಮಂಟಪಗಳ ಅಧ್ಯಕ್ಷರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳುವಂತೆ ನಿರ್ಣಯಿಸಲಾಯಿತು.

ಸಭೆಯಲ್ಲಿ ನಡೆದ ಹಲವಾರು ತೀರ್ಮಾನಗಳನ್ನು ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣನವರ ಗಮನಕ್ಕೆ ತರಲಾಗುತ್ತದೆ. ಉಪ ಸಮಿತಿಗಳ ಸಭೆಯನ್ನು ಮುಂದಿನ ಹಂತದಲ್ಲಿ ಕರೆಯಲಾಗುತ್ತದೆ. ಸರ್ವ ಸದಸ್ಯರು ದಸರಾ ಯಶಸ್ವಿಗೆ ಕೈ ಜೋಡಿಸುವಂತೆ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಪ್ರಮೋದ್ ಗಣಪತಿ ಕೋರಿದರು.

ಉಪ ಸಮಿತಿಗೆ ನೇಮಕ

ಯುವ ದಸರಾ ಸಮಿತಿಯ ಅಧ್ಯಕ್ಷರಾಗಿ ನಾಮೇರ ಅಂಕಿತ್ ಪೊನ್ನಪ್ಪ, ಮಹಿಳಾ ದಸರಾ ಸಮಿತಿಯ ಅಧ್ಯಕ್ಷರಾಗಿ ಸೌಮ್ಯ ಬಾಲು, ಮಕ್ಕಳ ದಸರಾ ಸಮಿತಿ ಅಧ್ಯಕ್ಷರಾಗಿ ಟಿ.ಬಿ.ಜೀವನ್ ನೇಮಿಸಲಾಗಿದ್ದು, ಉಳಿದ ಸಮಿತಿಗಳ ಅಧ್ಯಕ್ಷ ಆಯ್ಕೆ ಮುಂದಿನ ದಿನಗಳಲ್ಲಿ ನಡೆಯಲಿದೆ.

ಸಭೆಯಲ್ಲಿ ಕಾವೇರಿ ದಸರಾ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎನ್.ಪ್ರಕಾಶ್, ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಬಾಲು, ಸಮಿತಿ ಸದಸ್ಯರಾದ ಎಂ.ಮAಜುಳ, ಧ್ಯಾನ್ ಸುಬ್ಬಯ್ಯ ಉಪಸ್ಥಿತರಿದ್ದರು. ವಿವಿಧ ಮಂಟಪದ ಪ್ರಮುಖರಾದ ಕಿರಣ್, ಡಾಡು ಜೋಸೆಫ್, ಲಾಲು, ಕರ್ಣರಾಜ್, ಅಣ್ಣಪ್ಪ, ದಿಲನ್ ಚಂಗಪ್ಪ, ಪ್ರವೀಣ್ ಪೂಜಾರಿ, ರಮೇಶ್, ತಿರುನೆಲ್ಲಿಮಾಡ ಜೀವನ್, ಶೀಲಾ ಬೋಪಣ್ಣ, ಓಮನ ಮತ್ತಿತರು ಹಾಜರಿದ್ದರು.

ದಸರಾ ಸಮಿತಿಯ ಕಾರ್ಯದರ್ಶಿ ಎನ್.ಎಸ್. ಕಂದಾ ದೇವಯ್ಯ ಸ್ವಾಗತಿಸಿ, ವಂದಿಸಿದರು.

-ಹೆಚ್.ಕೆ. ಜಗದೀಶ್