ಬೆಂಗಳೂರು, ಸೆ. ೨೩: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಒತ್ತಾಯಿಸಿ ಶನಿವಾರ ನಡೆದ ಮಂಡ್ಯ ಬಂದ್ ಬಹುತೇಕ ಯಶಸ್ವಿಯಾಗಿದ್ದು, ಇದೀಗ ಬೆಂಗಳೂರು ಬಂದ್‌ಗೂ ಕರೆ ನೀಡಲಾಗಿದೆ.
ತಾ. ೨೬ರಂದು ಬೆಂಗಳೂರು ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಇಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ತೀವ್ರ ಪ್ರತಿಭಟನೆ ನಡೆಸಿದ ರಾಜ್ಯ ಬಿಜೆಪಿ ನಾಯಕರು ಬೆಂಗಳೂರು ಬಂದ್‌ಗೆ ಸಾಥ್ ನೀಡಿದ್ದಾರೆ.
ತಾ. ೨೬ ರಂದು ಬೆಂಗಳೂರು ನಗರ ಬಂದ್‌ಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ಕೊಟ್ಟಿದೆ. ಫ್ರೀಡಂಪಾರ್ಕ್ನಲ್ಲಿ ಕುರುಬೂರು ಶಾಂತಕುಮಾರ್ ಈ ಬಗ್ಗೆ ತಿಳಿಸಿದ್ದಾರೆ. ಅಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಗೆ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಬೇಕು. ಇದು ನಮ್ಮ ಬಂದ್ ಅಲ್ಲ, ಬೆಂಗಳೂರಿನ ನಾಗರಿಕರ ಬಂದ್. ಫಿಲ್ಮ್ ಛೇಂಬರ್, ಐಟಿ ಕಂಪನಿಗಳು ಬೆಂಬಲ ಕೊಡಬೇಕು. ಸರ್ಕಾರ ವಿಶೇಷ ವಿಧಾನಮಂಡಲದ ಅಧಿವೇಶನ ಕರೆಯಬೇಕು ಎಂದು ಕುರುಬೂರು ಶಾಂತಕುಮಾರ್ ಸರ್ಕಾರವನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.