ಮಡಿಕೇರಿ, ಸೆ. ೨೧: ಹೆಬ್ಬಾಲೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವೀಣಾ ಮಾತನಾಡಿ, ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ. ಬಹಳಷ್ಟು ರೈತರು ಹೈನುಗಾರಿಕೆಯಿಂದ ಜೀವನ ಕಟ್ಟಿಕೊಂಡಿದ್ದಾರೆ. ಹೆಬ್ಬಾಲೆಯಲ್ಲಿ ೧೨,೦೦೦ ಲೀಟರ್ ಹಾಲು ಪ್ರತಿದಿನ ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ ಹೆಬ್ಬಾಲೆ ಹಾಲು ಉತ್ಪಾದಕರ ಕೇಂದ್ರ ದೊಡ್ಡ ಕೇಂದ್ರವಾಗಿದ್ದು, ಲಾಭದ ಹಾದಿಯಲ್ಲಿದೆ. ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು. ಜಂತುಹುಳು ಮಾತ್ರೆಯನ್ನು ಬಳಸಿ ಜಾನುವಾರುಗಳಿಗೆ ಪೌಷ್ಟಿಕ ಆಹಾರವನ್ನು ನೀಡಿ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿ ಅಭಿವೃದ್ಧಿಗೆ ಸಹಕರಿಸಿ ಎಂದರು.

ಹೆಬ್ಬಾಲೆ ಹಾಲು ಉತ್ಪಾದಕರ ಸಂಘವು ಲಾಭದ ಹಾದಿಯಲ್ಲಿದ್ದು ಈ ಸಂಘವನ್ನು ಉಳಿಸಿ ಬೆಳೆಸುವುದು ರೈತರ ಕೈಯಲ್ಲಿದೆ ಎಂದರು. ನಾರಾಯಣ ಹೆಚ್.ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಪ್ರಮುಖರಾದ ರಾಜಶೇಖರ್, ರಾಗಿಣಿ, ಜವರಯ್ಯ, ಸೋಮಣ್ಣ, ಸುಭಾಷ್, ಪ್ರಭಾಕರ್, ಶಶಿಕುಮಾರ್, ಹಾಲು ಉತ್ಪಾದಕರು ಭಾಗವಹಿಸಿದ್ದರು.