ಮಡಿಕೇರಿ, ಸೆ. ೨೨; ಭಕ್ತಿಯಿಂದ ದೇವರನ್ನು ಪೂಜಿಸಿದರೆ ದೇವರು., ಅಥವಾ ದೇವರೊಂದಿಗೆ ಇರುವ ಹಾವು, ಗರುಡ, ಸಿಂಹ, ಹುಲಿ ಪ್ರತ್ಯಕ್ಷವಾಗುವುದನ್ನು ಪುರಾಣಗಳಲ್ಲಿ, ಕತೆಗಳಲ್ಲಿ ಓದಿದ್ದೇವೆ., ಪೌರಾಣಿಕ ಧಾರಾವಾಹಿ., ಸಿನಿಮಾಗಳಲ್ಲಿ ನೋಡಿದ್ದೇವೆ. ಪ್ರತ್ಯಕ್ಷ ಅನುಭವವಾಗಿರುವದು ವಿರಳವೆನ್ನಬಹುದು. ಆದರೆ., ಇಲ್ಲೊಬ್ಬ ಪುಟಾಣಿ ಆದಿಪೂಜಿತ ಗಣಪನನ್ನು ಪೂಜಿಸುತ್ತಿರುವಾಗ ಗಣಪನ ವಾಹನ ಮೂಷಿಕ (ಇಲಿ) ಪ್ರತ್ಯಕ್ಷವಾಗಿ ನಂಬಿಕೆಗೆ ಇಂಬುಕೊಡುವAತೆ ಮಾಡಿದೆ..!

ನಾಪೋಕ್ಲುವಿನ ಕೇಲೇಟಿರ ಕವಿತಾ ಹಾಗೂ ಗಣಪತಿ ಅವರ ಪುತ್ರಿ ಕ್ಷಿಪ್ರ ಗಣಪತಿ (೮ವರ್ಷ) ಅಂಕುರ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಮೊನ್ನೆ ದಿನ ಶಾಲೆ ಬಿಟ್ಟ ಬಳಿಕ ಮನೆಗೆ ಬಂದವಳು ಮನೆಯ ಅಂಗಳದಲ್ಲಿ ಹೂಗಳನ್ನು ಕಿತ್ತು ‘ಪೂಜೆ ಆಟ’ ಆಡುತ್ತಿದ್ದಳು. ಆಟ ಆಡಲು ದೇವರ ಫೋಟೋ ಬೇಕೆಂದು ಅಮ್ಮನನ್ನು ಕೇಳಿದಾಗ ಅಮ್ಮ ‘ಹಾಗೆಲ್ಲ ದೇವರ ಫೋಟೋಗಳನ್ನು ಹೊರಗಡೆ ಇಟ್ಟು ಆಟ ಆಡಬಾರದು’ ಅಂತ ಹೇಳಿ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಗೂ ಹೂ ಪಾತಿಯಿಂದ ಸ್ವಲ್ಪ ಮಣ್ಣು ತೆಗೆದುಕೊಟ್ಟು ‘ಗಣಪನನ್ನು ಮಾಡಿ ಆಟವಾಡು’ ಎಂದು ಹೇಳಿ ಒಳ ಹೋಗಿದ್ದಾರೆ.

ಪುಟಾಣಿ ಕ್ಷಿಪ್ರ ಮಣ್ಣಿನ ಗಣಪನನ್ನು ಮಾಡಿ ಅದನ್ನೊಂದು ಡಬ್ಬದ ಮೇಲಿಟ್ಟು ಪೂಜೆ ಆಟ ಶುರು ಮಾಡಿದ್ದಾಳೆ. ಜೊತೆಗೆ ಪಕ್ಕದ ಮನೆಯ ಬಾಲಕನೂ ಕೈಜೋಡಿಸಿದ್ದಾನೆ. ಪುಟಾಣಿಗಳು ‘ಗಣಪತಿ ಬಪ್ಪ ಮೋರಿಯಾ..’ ಎಂದು ಸ್ತುತಿಸುತ್ತಾ ಆಟ ಆಡುತ್ತಿದ್ದಂತೆ ಅಲ್ಲೆಲ್ಲೋ ಪಕ್ಕದಲ್ಲಿ ಮಣ್ಣಿನೊಳಗಿದ್ದ ಇಲಿ ಮರಿಯೊಂದು ಹೊರಬಂದು ಗಣಪನ ಕಾಲ ಬುಡದಲ್ಲಿ ಕುಳಿತಿದೆ. ಹೇಗೆ ನಾವು ಗಣಪನ ಚಿತ್ರ ಹಾಗೂ ವಿಗ್ರಹಗಳ ಬಳಿ ಮೂಷಿಕನನ್ನು ನೋಡುತ್ತೇವೆಯೋ ಅದೇ ರೀತಿ ಈ ಮೂಷಿಕ ಜೀವಂತವಾಗಿ ಗಣಪನ ಕಾಲ ಬುಡದಲ್ಲಿ ಓಡಾಡುತ್ತಿರುವದನ್ನು ಗಮನಿಸಿದ ಕ್ಷಿಪ್ರಾಳ ಅಮ್ಮ ಕವಿತಾ ಸೆರೆ ಹಿಡಿದಿದ್ದಾರೆ. ತನ್ನ ಪೂಜೆಗೆ ಗಣಪನ ವಾಹನ ಪ್ರತ್ಯಕ್ಷವಾಗಿದನ್ನ ಕಂಡ ಕ್ಷಿಪ್ರ ಸಂತಸದ ಕಡಲಲ್ಲಿ ತೇಲಾಡುತ್ತಿದ್ದಾಳೆ..!

? ಕುಡೆಕಲ್ ಸಂತೋಷ್