ಮಡಿಕೇರಿ, ಸೆ. ೨೧: ನಿನ್ನೆ ಸಂಜೆ ಮಡಿಕೇರಿ ಸನಿಹದ ಕಾಟಕೇರಿ ಬಳಿ ಸಂಭವಿಸಿದ ರಸ್ತೆ ಅವಘಡದಲ್ಲಿ ಗಾಯಗೊಂಡಿರುವ ಮಡಿಕೇರಿಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಶಿವಾನಂದ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಹಾಗೂ ಹಾಲಿನ ಲಾರಿ ನಡುವೆ ಅವಘಡ ನಡೆದಿದ್ದು, ಮತ್ತೋರ್ವ ವಿದ್ಯಾರ್ಥಿ ಸಂಜೀವನಾಯಕ್ ಎಂಬವರ ಪುತ್ರ ಉಡುಪಿ ಮೂಲದ ವಿಜೇಶ್ (೨೨) ನಿನ್ನೆ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಇಂದು ಬೆಳಿಗ್ಗೆ ಉಡುಪಿಗೆ ಸಾಗಿಸಲಾಗಿದ್ದು, ಅಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ವಿಜೇಶ್ ಹಾಗೂ ಶಿವಾನಂದ್ ಅಂತಿಮ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಸ್ನೇಹಿತರಾಗಿದ್ದು, ಉಡುಪಿಯ ವಿಜೇಶ್ ಅವರ ಮನೆಗೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ನಿನ್ನೆ ಈ ದುರ್ಘಟನೆ ನಡೆದಿತ್ತು. ಮೃತ ವಿಜೇಶ್ ಗಣೇಶ್ ಉಡುಪಿಯ ಅಂಬಲ್ ಪಾಡಿಯ ಸಂಜೀವ ನಾಯಕ್ ಅವರ ಪುತ್ರರಾಗಿದ್ದಾರೆ.
(ಮೊದಲ ಪುಟದಿಂದ) ಶಿವಾನಂದ್ ಅರವಳ್ಳಿ ಮೂಲತಃ ಬೆಳಗಾವಿಯ ಮುಟ್ಟಪ್ಪ ಅವರ ಪುತ್ರರಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಂತಾಪ: ವಿಜೇಶ್ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ನಗರದ ಮೆಡಿಕಲ್ ಕಾಲೇಜಿನಲ್ಲಿ ಅವರಿಗೆ ಸಂಸ್ಥೆಯ ಸಿಬ್ಬಂದಿಗಳು, ಇತರ ವಿದ್ಯಾರ್ಥಿಗಳು ಸಂತಾಪ ಸೂಚಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಕಾಲೇಜಿನ ಥಿಯರಿ ತರಗತಿಗೆ ಇಂದು ರಜೆ ನೀಡಲಾಗಿತ್ತು. ಘಟನೆ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.