ಕಣಿವೆ. ಸೆ. ೨೨ : ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನೂತನವಾಗಿ ಆರಂಭಿಸಿದ ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಇದುವರೆಗೂ ಸಿಬ್ಬಂದಿಗಳನ್ನು ಸರ್ಕಾರ

ನೇಮಕ ಮಾಡಿಲ್ಲ.

ಕಾರ್ಯನಿರ್ವಹಣಾಧಿಕಾರಿ, ಸಹಾಯಕ ನಿರ್ದೇಶಕರು, ಯೋಜನಾಧಿಕಾರಿ, ಲೆಕ್ಕಾಧಿಕಾರಿ, ವ್ಯವಸ್ಥಾಪಕರು, ಪ್ರಥಮ, ದ್ವಿತೀಯ ದರ್ಜೆಯ ಗುಮಾಸ್ತರು, ಡಾಟಾ ಎಂಟ್ರಿ ನೌಕರರು, ಇತರೇ ಸಿಬ್ಬಂದಿಗಳು ಹಾಗೂ ಡಿ ದರ್ಜೆಯ ನೌಕರರು ಸೇರಿದಂತೆ ಯಾವೊಂದು ಅಧಿಕಾರಿ ಮತ್ತು ಸಿಬ್ಬಂದಿಗಳಿಲ್ಲದೆ ಆಡಳಿತ ವೇಗ ಕಳೆದುಕೊಂಡಿದೆ.

ಈ ಹಿಂದೆ ಇದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಕಛೇರಿಯ ನಾಮಫಲಕ ಬದಲಾಗಿದೆಯೇ ಹೊರತು ಮತ್ತೆ ಬೇರೇನೂ ಬದಲಾವಣೆಯೇ ಅಗಿಲ್ಲ ಎಂಬುದು ಆಕ್ಷೇಪಕ್ಕೆ ಕಾರಣವಾಗಿದೆ.

ನೂತನ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ನೀರಿನ ಸೌಲಭ್ಯವೇ ಇಲ್ಲದೇ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಇರುವ ಏಕ ಮಾತ್ರ ಮಹಿಳಾ ಸಿಬ್ಬಂದಿ ಹಾಗೂ ಕಛೇರಿಯ ಪ್ರಾಂಗಣದಲ್ಲೇ ಇರುವ ಗ್ರಂಥಾಲಯದ ಮತ್ತೋರ್ವ ಮಹಿಳಾ ಸಿಬ್ಬಂದಿಗಳು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ತಾಲೂಕು ಪಂಚಾಯಿತಿ ಆವರಣದಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಬರುವ ಸಾಹಿತ್ಯಾಭಿಮಾನಿಗಳಿಗೂ ಕೊನೆ ಪಕ್ಷ ಕುಡಿಯುವ ನೀರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಎರಡು ತಿಂಗಳಿAದ ಈ ಕಚೇರಿಗೆ ನೀರು ಪೂರೈಸುತ್ತಿದ್ದ ಕೊಳವೆ ಬಾವಿಯ ಮೋಟಾರ್ ದುರಸ್ತಿಗೆ ತುತ್ತಾಗಿರುವುದು ನೀರಿನ ಸಮಸ್ಯೆಗೆ ಕಾರಣ ಎನ್ನಲಾಗಿದೆ.

ಈ ಬಗ್ಗೆ ಸ್ಥಳೀಯ ಪುರಸಭೆಯ ಅಧಿಕಾರಿಗಳ ಬಳಿ ಕೇಳಿದರೆ ತಾಲೂಕು ಪಂಚಾಯಿತಿಗೆ ಪುರಸಭೆಯಿಂದ ಯಂತ್ರವನ್ನು ಸರಿಪಡಿಸಿ ನೀರಿನ ವ್ಯವಸ್ಥೆ ಕಲ್ಪಿಸಲು ಬರುವುದಿಲ್ಲ. ಅದನ್ನು ತಾಲೂಕು ಪಂಚಾಯಿತಿಯವರೇ ಮಾಡಿಕೊಳ್ಳಬೇಕು ಎನ್ನುತ್ತಾರೆ.

ಇನ್ನು ತಾಲೂಕು ಪಂಚಾಯಿತಿಗೆ ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗದ ಕಾರಣ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಾಲೂಕು ಪಂಚಾಯಿತಿ ಪ್ರಬಾರ ಇಓ ಜಯಣ್ಣ ಹೇಳುತ್ತಾರೆ.

ನೀರಿಲ್ಲದೇ ಒಣಗುತ್ತಿರುವ ಉದ್ಯಾನ

ಈ ಹಿಂದೆ ಗ್ರಾಮ ಪಂಚಾಯಿತಿ ಇದ್ದಾಗ ನಿರ್ಮಾಣ ಮಾಡಿದ್ದ ಆಕರ್ಷಕ ಉದ್ಯಾನವನ ಇದೀಗ ನೀರಿಲ್ಲದೇ ಒಣಗಿ ನಿರ್ನಾಮವಾಗುತ್ತಿದ್ದರೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕನಿಷ್ಟ ಬದ್ಧತೆ ತೋರದ ಕಾರಣ ತಾಲೂಕು ಪಂಚಾಯಿತಿ ಅವರಣದಲ್ಲಿನ ಹಸಿರು ಗಿಡಗಳು, ಹಸಿರುಡುಗೆ ತೊಟ್ಟು ನಳ ನಳಿಸುತ್ತಿದ್ದ ಹುಲ್ಲಿನ ಹೊದಿಕೆ ಎಲ್ಲವೂ ನೀರಿಲ್ಲದೇ ಬಿಸಿಲ ತಾಪಕ್ಕೆ ಒಣಗುತ್ತಿದೆ.

ಗ್ರಂಥಪಾಲಕಿಗೆ ವರ್ಷದಿಂದ ವೇತನವೂ ಇಲ್ಲ

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧೀನದಲ್ಲಿದ್ದ ಸ್ಥಳೀಯ ಗ್ರಂಥಾಲಯದ ಸಿಬ್ಬಂದಿಗೆ ಪಂಚಾಯಿತಿಯಿAದ ಮಾಸಿಕ ವೇತನ ನೀಡಲಾಗುತ್ತಿತ್ತು. ಆದರೆ ಗ್ರಾಮ ಪಂಚಾಯಿತಿ ಕುಶಾಲನಗರ ಪುರಸಭೆಗೆ ವಿಲೀನಗೊಂಡ ಕಳೆದ ಒಂಭತ್ತು ತಿಂಗಳಿನಿAದ ಈತನಕ ಗ್ರಂಥ ಪಾಲಕಿಗೆ ವೇತನವನ್ನೇ ನೀಡಿಲ್ಲ.