ಸುಂಟಿಕೊಪ್ಪ, ಸೆ. ೨೨: ಮಡಿಕೇರಿ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘವು ೮.೬೫ ಲಕ್ಷ ರೂಗಳ ನಿವ್ವಳ ಲಾಭಗಳಿಸಿ ಸದಸ್ಯರಿಗೆ ಶೇ.೮ ರಷ್ಟು ಡಿವಿಡೆಂಡ್ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಸಿರಿಲ್ ಮೌರಾಸ್ ವಾರ್ಷಿಕ ಮಹಾಸಭೆಯಲ್ಲಿ ತಿಳಿಸಿದರು.

ಮಡಿಕೇರಿ ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ಸಂಘದ ೫ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಂಘವು ಸ್ಥಾಪನೆಯಾದ ಕೇವಲ ಐದೂವರೆ ವರ್ಷಗಳಲ್ಲಿ ಗಣನೀಯ ಸಾಧನೆಯನ್ನು ಕಂಡಿದ್ದು, ವಾರ್ಷಿಕ ರೂ ೩೦.೭೨ ಕೋಟಿಯಷ್ಟು ಒಟ್ಟು ವ್ಯವಹಾರ ನಡೆಸುತ್ತಿದೆ ಎಂದರು. ಸಂಘದಲ್ಲಿ ೧೦೩೬ ಸದಸ್ಯರಿದ್ದು, ರೂ ೫೪.೯೨ ಲಕ್ಷ ಬಂಡವಾಳವನ್ನು ಹೊಂದಿದೆ. ೨೦೨೨-೨೩ನೇ ಸಾಲಿನ ಅಂತ್ಯಕ್ಕೆ ಒಟ್ಟು ೬.೫೨ ಕೋಟಿಯಷ್ಟು ಠೇವಣಿಯನ್ನು ಹೊಂದಿದೆ. ಒಟ್ಟು ರೂ ೫.೭೬ ಕೋಟಿಯಷ್ಟು ವಿವಿಧ ಸಾಲಗಳು ಹೊರಬಾಕಿ ಇದೆ.

ಸಂಘದಲ್ಲಿ ಹಣಕಾಸು ವ್ಯವಹಾರಗಳನ್ನು ಆನ್‌ಲೈನ್‌ನಲ್ಲಿ ಮಾಡಲು ಅನೂಕೂಲವಾಗುವಂತೆ ನೆಫ್ಟ್ ಮತ್ತು ಆರ್‌ಟಿಜಿಎಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಸ್ಟಾಂಪಿAಗ್ ಸೌಲಭ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.

ಸಂಘದಲ್ಲಿ ವಿವಿಧ ರೀತಿಯ ಠೇವಣಿಗಳನ್ನು ಆಕರ್ಷಕ ಬಡ್ಡಿ ದರದಲ್ಲಿ ಸಂಗ್ರಹಿಸಲಾಗುತ್ತಿದ್ದು, ಅದೇ ರೀತಿ ವಿವಿಧ ರೀತಿಯ ಸಾಲಗಳನ್ನು ನೀಡಲಾಗುತ್ತಿದ್ದು ಸದಸ್ಯರು ಈ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು. ಸಂಘದ ಸದಸ್ಯರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ ಹಿನ್ನೆಲೆಯಲ್ಲಿ ಶೇ.೯೩.೦೩ ರಷ್ಟು ಮರುಪಾವತಿ ಸಾಧ್ಯವಾಗಿದ್ದು, ಇದರಿಂದ ಠೇವಣಿದಾರರಿಗೆ ಸಕಾಲದಲ್ಲಿ ಠೇವಣಿ ಮರು ಪಾವತಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರಲ್ಲದೆ ಸಕಾಲದಲ್ಲಿ ಸಾಲ ಮರುಪಾವತಿಸಿ ಸಹಕರಿಸಿದವರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಸಂಘವು ಪ್ರಗತಿ ಪಥದಲ್ಲಿದ್ದು, ಜಿಲ್ಲಾ ಮಟ್ಟದ ಪ್ರಮುಖ ಸಹಕಾರಿ ಸಂಘಗಳಲ್ಲಿ ಒಂದಾಗಿ ಬೆಳೆಯುತ್ತಿದ್ದು, ಮುಂದಿನ ವರ್ಷಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ತೆರೆಯುವುದಾಗಿ ಅವರು ತಿಳಿಸಿದರು.

ಈ ಸಂದರ್ಭ ೨೦೨೨-೨೩ನೇ ಸಾಲಿನಲ್ಲಿ ಹತ್ತನೇ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು. ಸಂಘದ ಹಿರಿಯ ಸದಸ್ಯರಾದ ಕೆ.ಟಿ. ಬೇಬಿ ಮ್ಯಾಥ್ಯು, ಆಗಸ್ಟೀನ್ ಜಯರಾಜ್ ಅವರನ್ನು ಅಧ್ಯಕ್ಷ ಸಿರಿಲ್‌ಮೌರಾಸ್ ಸನ್ಮಾನಿಸಿದರು.

ಸಂಘದ ನಿರ್ದೇಶಕರಾದ ಬೆನಡಿಕ್ಟ್ ಸಾಲ್ಡಾನ ಪ್ರಾರ್ಥಿಸಿ, ಸಾರ್ಜೇಂಟ್ ಇಮ್ಯಾನುವೆಲ್ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೌತೀಸ್ ಡಿಸೋಜ ನಿರೂಪಿಸಿ, ಎಸ್.ಎಂ. ಡಿಸಿಲ್ವಾ ವಂದಿಸಿದರು.