(ಹೆಚ್.ಕೆ. ಜಗದೀಶ್)ಗೋಣಿಕೊಪ್ಪಲು, ಸೆ. ೨೨: ಪ್ರವಾಸಿಗರ ತಾಣವಾಗಿರುವ ಕೊಡಗು ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಯ ಸ್ಥಳಗಳನ್ನು ವೀಕ್ಷಿಸಲು ಆಗಮಿಸುತ್ತಾರೆ. ಪ್ರಮುಖವಾಗಿ ವಾರದ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನತ್ತ ಜನರು ಆಗಮಿಸುತ್ತಾರೆ. ಇಲ್ಲಿಯ ಸೌಂದರ್ಯ ಹಾಗೂ ಆತಿಥ್ಯ ಸವಿದು ಸಂತುಷ್ಟರಾಗಿ ವಾಪಸ್ಸಾಗುತ್ತಾರೆ.

ಇದೀಗ ಈ ನಾಡಿನ ಅನ್ನದಾತ ತನ್ನ ಕೃಷಿ ಭೂಮಿಯಲ್ಲಿ ಬೆಳೆದ ವಿಶೇಷ ತಳಿಯಾದ ಕೃಷ್ಣ ಭತ್ತವನ್ನು ತನ್ನ ಗದ್ದೆಯಲ್ಲಿ ಬೆಳೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ಪೊನ್ನಂಪೇಟೆ ಹುದೂರು ಗ್ರಾಮದ ಪ್ರಗತಿಪರ ರೈತ ರವಿಶಂಕರ್ ಈ ವಿಶೇಷ ತಳಿಯ ಭತ್ತವನ್ನು ತನ್ನ ಭೂಮಿಯಲ್ಲಿ ಬೆಳೆದಿದ್ದಾರೆ. ಸದಾ ಹಸಿರಿನಿಂದ ಕೂಡಿರುವ ಭತ್ತದ ಗದ್ದೆಯ ನಡುವೆ ವಿಶೇಷ ತಳಿ ಕೃಷ್ಣ ಭತ್ತವನ್ನು ಬೆಳೆದಿರುವುದರಿಂದ ಗದ್ದೆಯು ಕಡು ನೇರಳೆ ಬಣ್ಣದಿಂದ ಕೂಡಿ ನಳನಳಿಸುತ್ತಿದ್ದು, ನಾಗರಿಕರನ್ನು, ಪ್ರವಾಸಿಗರನ್ನು ಇತ್ತ ಸೆಳೆಯುತ್ತಿದೆ. ಕೃಷಿ ಪ್ರಧಾನವಾದ ಕೊಡಗಿನಲ್ಲಿ ಇಲ್ಲಿಯ ರೈತ ಹಲವು ರೀತಿಯ ಕೃಷಿಗಳನ್ನು ಮಾಡುತ್ತ ಹಲವು ಸಾಧನೆ ಮಾಡಿದ್ದಾನೆ. ಈ ಸಾಲಿಗೆ ಇದೀಗ ರವಿಶಂಕರ್ ತಾನು ಬೆಳೆದಿರುವ ವಿಶೇಷ ತಳಿಯು ಜನಾಕರ್ಷಣೆ ಪಡೆಯುತ್ತಿದೆ.

ದ. ಕೊಡಗಿನ ಪೊನ್ನಂಪೇಟೆ ನಗರದ ಅನತಿ ದೂರದಲ್ಲಿರುವ ಹಳ್ಳಿಗಟ್ಟುವಿಗೆ ತೆರಳುವ ಹುದೂರು ಗ್ರಾಮದ ಬಳಿಯ ರಸ್ತೆ ಬದಿಯಲ್ಲಿ ಪ್ರಗತಿಪರ ರೈತ ರವಿಶಂಕರ್ ತಮ್ಮ ೧೮ ಎಕರೆ ಭತ್ತದ ಗದ್ದೆಯಲ್ಲಿ ೩೦ಕ್ಕೂ ಅಧಿಕ ತಳಿಯ ಬೀಜ ಬಿತ್ತನೆ ನಡೆಸಿ ಭತ್ತ ಬೆಳೆಯುತ್ತಿದ್ದಾರೆ. ಇದರಲ್ಲಿ ಅರ್ಧ ಎಕರೆ ಭೂಮಿಯಲ್ಲಿ ಕೃಷ್ಣ ತಳಿಯ ಕಡು ನೇರಳೆ ಬಣ್ಣದ ಭತ್ತದ ಪೈರು ಅತ್ಯಂತ ಸೊಗಸಾಗಿ ಬೆಳೆದು ನಿಂತಿದೆ.

ಭತ್ತದ ಕೃಷಿಯಲ್ಲಿ ಪ್ರತಿ ವರ್ಷವು ಉತ್ತಮ ತಳಿಗಳನ್ನು ಬೆಳೆಯುತ್ತಿರುವ ಇಲ್ಲಿನ ರೈತರಾದ ರವಿಶಂಕರ್‌ರವರು ತಮ್ಮ ಭತ್ತದ ಗದ್ದೆಗೆ ಯಾವುದೇ ರೀತಿಯ ಕೀಟ ನಾಶಕಗಳನ್ನು ಸಿಂಪಡಿಸುತ್ತಿಲ್ಲ. ಭೂಮಿಯಲ್ಲಿರುವ ರೈತನ ಪಾಲಿಗೆ ವರದಾನವಾಗಿರುವ ಎರೆ ಹುಳ ಸೇರಿದಂತೆ ಹಲವು ಬಗೆಯು ಕೀಟಾಣುಗಳು ಭೂಮಿಯಲ್ಲಿ ಉತ್ಪತ್ತಿಗೊಂಡು ರೈತನ ಭತ್ತದ ಬೆಳೆಗೆ ಸಹಾಯಕ ವಾಗುತ್ತಿರುವುದನ್ನು ಮನಗಂಡಿರುವ ಇವರು ಯಾವುದೇ ರೀತಿಯ ಕೀಟ ನಾಶಕಗಳನ್ನು ಇಂದಿಗೂ ಬಳಸುತ್ತಿಲ್ಲ. ಭತ್ತದ ಗದ್ದೆಯಲ್ಲಿ ಹುಟ್ಟುವ ಕಳೆಗಳನ್ನು ತೆಗೆಯಲು ಕಾರ್ಮಿಕರ ಸಹಾಯ ಪಡೆಯುತ್ತಿದ್ದಾರೆ.

ರಸ್ತೆ ಬದಿಯಲ್ಲಿಯೇ ವಿಸ್ತಾರವಾದ ಭತ್ತದ ಗದ್ದೆಯಲ್ಲಿ ಬೆಳೆದಿರುವ ಕಡು ನೇರಳೆ ಬಣ್ಣದ ಭತ್ತದ ಪೈರನ್ನು ಇಲ್ಲಿಯ ನಾಗರಿಕರು ಹಾಗೂ ರಸ್ತೆ ಬದಿಯಲ್ಲಿ ತೆರಳುವ ಸಾರ್ವಜನಿಕರು ಭತ್ತದ ಗದ್ದೆಗಳಿಗೆ ತೆರಳಿ ಅಪರೂಪದ ಭತ್ತದ ಪೈರಿನೊಂದಿಗೆ ತಮ್ಮ ಮೊಬೈಲ್‌ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತ ವಿನೂತನ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ನೂರಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭಾಗದಲ್ಲಿ ಯಾರೇ ತೆರಳಿದರೂ ಈ ನೇರಳೆ ಬಣ್ಣದ ಭತ್ತದ ಪೈರು ಆಕರ್ಷಿಸುತ್ತಿದೆ.