ಮಡಿಕೇರಿ, ಸೆ. ೨೨ : ಕೊಡಗು ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳ ಕರಾಟೆ ಪಂದ್ಯಾವಳಿಯು ತಾ. ೨೪ ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕೊಡಗು ಕರಾಟೆ ಅಸೋಸಿಯೇಷನ್ ಸಂಯೋಜಕ ಮಾದೇಟಿರ ಪಿ.ತಿಮ್ಮಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ನಗರದ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವಿವಿಧೋದ್ದೇಶ ಸಭಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ಜಿಲ್ಲಾ ಶಿಕ್ಷಣಾಧಿಕಾರಿ ಅಜ್ಜಿಕುಟ್ಟಿರ ಸೌಮ್ಯ ಪೊನ್ನಪ್ಪ ಹಾಗೂ ಶಿಕ್ಷಣ ಇಲಾಖೆ ಕ್ರೀಡಾ ಮುಖ್ಯಸ್ಥ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಕರಾಟೆ ಪಂದ್ಯಾವಳಿಗೆ ಮೈಸೂರು ಕರಾಟೆ ಅಸೋಸಿಯೇಷನ್‌ನ ತೀರ್ಪುಗಾರರು ಆಗಮಿಸಲಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳು ಬೆಳಿಗ್ಗೆ ೯ ಗಂಟೆಯ ಒಳಗಾಗಿ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿಗಳ ಸಹಿ ಹೊಂದಿರುವ ಅರ್ಹತಾ ಪತ್ರ ಮತ್ತು ಆಧಾರ್ ಕಾರ್ಡ್ ಗುರುತಿನ ಚೀಟಿಯೊಂದಿಗೆ ಸ್ಥಳದಲ್ಲಿ ಹಾಜರಿರುವಂತೆ ತಿಮ್ಮಯ್ಯ ಮನವಿ ಮಾಡಿದ್ದಾರೆ.