ಸಿದ್ದಾಪುರ, ಸೆ. ೨೨: ಕಾಫಿ ತೋಟಗಳಲ್ಲಿ ಬೀಡು ಬಿಟ್ಟ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ವಿಫಲಗೊಂಡಿತ್ತು.

ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಬೈರಂಬಾಡ - ಕಣ್ಣಂಗಾಲ ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂಧಲೆ ನಡೆಸುತ್ತಿದೆ. ಅಲ್ಲದೇ ಕೃಷಿಫಸಲುಗಳನ್ನು ನಾಶಗೊಳಿಸುತ್ತಿತ್ತು. ಮಾನವನ ಮತ್ತು ವಾಹನಗಳ ಮೇಲೆ ದಾಳಿ ನಡೆಸಲು ಮುಂದಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ತೋಟದೊಳಗಿನಿಂದ ಕಾಡಾನೆಗಳನ್ನು ಓಡಿಸಲು ಯತ್ನಿಸಿದರು. ಆದರೆ ಕಾಡಾನೆಗಳು ಒಂದು ಕಾಫಿತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತ ಕಾರ್ಯಾಚರಣೆ ತಂಡವನ್ನು ಸುತ್ತಾಡಿಸಿತ್ತು. ಕೆಲವು ಕಾಡಾನೆಗಳು ಗುಂಪಿನಿAದ ಬೇರ್ಪಟ್ಟು ಕಾಫಿ ತೋಟದೊಳಗೆ ಉಳಿದುಕೊಂಡಿವೆ.

ಕಾರ್ಯಾಚರಣೆ ಸಂದರ್ಭದಲ್ಲಿ ಮರಿಯಾನೆ ಸೇರಿದಂತೆ ೭ಕ್ಕೂ ಅಧಿಕ ಕಾಡಾನೆಗಳು ಕಂಡು ಬಂದಿವೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ದಿಢೀರ್ ಮಳೆ ಸುರಿದ ಕಾರಣ ಕಾರ್ಯಾಚರಣೆಗೆ ಆಡಚಣೆ ಉಂಟಾಯಿತು.

ವೀರಾಜಪೇಟೆ ತಾಲೂಕು ಡಿಎಫ್‌ಓ ಶರಣ ಬಸಪ್ಪ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕೆ.ಪಿ. ದೇವಯ್ಯ ದೇಯಂಡ ಸಂಜೀತ್ ಸೋಮಯ್ಯ, ಸಿಬ್ಬಂದಿಗಳು ಹಾಜರಿದ್ದರು. - ವಾಸು