ಕೂಡಿಗೆ, ಸೆ. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಆರ್. ಸುನೀಲ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಹಾಜರಿದ್ದ ರೈತ ಸದಸ್ಯರು ಸಂಘದ ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ೨೦೨೨-೨೩ನೇ ಸಾಲಿನ ಆಡಿಟ್ ವರದಿ ಪರಿಶೀಲನೆ, ಅಂದಾಜು ಬಜೆಟ್ ಮಂಜೂರು, ಬೈಲಾ ತಿದ್ದುಪಡಿ ಸೇರಿದಂತೆ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ತಯಾರಿಸುವ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ವಾರ್ಷಿಕ ವರದಿಯನ್ನು ಸಭೆಗೆ ಕಾರ್ಯದರ್ಶಿ ಯೋಗೇಶ್ ಮಂಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಒಕ್ಕೂಟದ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಹೈನುಗಾರಿಕೆಗೆ ಬೇಕಾಗುವ ಸಾಲ ಸೌಲಭ್ಯಗಳನ್ನು ಸಹಕಾರ ಸಂಘದ ಮೂಲಕ ನೀಡಲಾಗುವುದು ಅದರ ಸದುಪಯೋಗ ನಡೆಸಿಕೊಳ್ಳುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ ಎಸ್.ಆರ್. ಸುನಿಲ್ ರಾವ್ ಮಾತಾಡುತ್ತಾ ಸಂಘದ ಬೆಳವಣಿಗೆಯ ಬೇಕಾಗುವ ಹೊಸ ಯೋಜನೆಗೆ ಪೂರಕವಾಗಿ ಈಗಾಗಲೇ ಹಾಸನ ಹಾಲು ಒಕ್ಕೂಟಕ್ಕೆ ಮನವಿಯನ್ನು ಸಲ್ಲಿಸಲಾಗಿದೆ, ಅದರ ಮುಖೇನ ಸಂಘದ ಮತ್ತು ಉತ್ಪಾದಕದ ರೈತರ ಅಭಿವೃದ್ಧಿಗೆ ಪ್ರಯತ್ನ ಪಡುವುದಾಗಿ ತಿಳಿಸಿದರು.

ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಸಂಘಕ್ಕೆ ಹಾಲು ಹಾಕುವ ಉತ್ಪಾದಕರು ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಮತ್ತು ಒಕ್ಕೂಟದ ಯೋಜನೆಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ರೈತರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕೂಡಿಗೆ ಗ್ರಾ.ಪಂ. ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್, ಸಂಘದ ಉಪಾಧ್ಯಕ್ಷ ಪುಟ್ಟಣಯ್ಯ, ನಿರ್ದೇಶಕರಾದ ತಮ್ಮಯ್ಯ, ವಿ.ಸಿ. ಸುರೇಶ್, ದೇವಿರಮ್ಮ ದೇವರಾಜ, ಹೆಚ್.ವಿ. ವೈರಮುಡಿ, ಡಿ.ಬಿ. ದೇವಯ್ಯ ಸಂಘದ ಕಾರ್ಯದರ್ಶಿ ಎಂ.ಎನ್. ಯೋಗೇಶ ಸೇರಿದಂತೆ ಹಾಲು ಉತ್ಪಾದಕರ ಸಂಘದ ಸದಸ್ಯರು ಹಾಜರಿದ್ದರು.