ನವದೆಹಲಿ, ಸೆ. ೨೦: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಬಹು ನಿರೀಕ್ಷಿತ ನಾರಿ ಶಕ್ತಿ ವಂದನ್ ವಿಧೇಯಕ(ಮಹಿಳಾ ಮೀಸಲಾತಿ ಮಸೂದೆ)ಯನ್ನು ಬುಧವಾರ ಲೋಕಸಭೆಯಲ್ಲಿ ಅಂಗೀಕರಿಸ ಲಾಗಿದೆ.
ಮಂಗಳವಾರ ನೂತನ ಸಂಸತ್ ಭವನದಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಮಹಿಳೆಯರಿಗೆ ಶೇ. ೩೩ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದರು.
ಸುಮಾರು ೮ ಗಂಟೆಗಳ ಚರ್ಚೆಯ ಬಳಿಕ ಇಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನಾರಿ ಶಕ್ತಿ ವಂದನ್ ವಿಧೇಯಕವನ್ನು ಮತಕ್ಕೆ ಹಾಕಿದರು.
ಬಹುತೇಕ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ವು ಬೆಂಬಲಿಸಿದ್ದು, ವಿಧೇಯಕದ ಪರವಾಗಿ ೪೫೪ ಸಂಸದರು ಮತ ಚಲಾಯಿಸಿದರೆ, ಇಬ್ಬರು ಸಂಸದರು ಮಾತ್ರ ಈ ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ೨೧೩ ಸದಸ್ಯರ ಬೆಂಬಲ ಅಗತ್ಯವಿತ್ತು.
ಲೋಕಸಭೆಯಲ್ಲಿ ಅಂಗೀಕಾರ ಗೊಂಡಿರುವ ನಾರಿ ಶಕ್ತಿ ವಂದನ್ ವಿಧೇಯಕವನ್ನು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ಈ ಮಸೂದೆ ಮೂಲಕ ಸಂವಿಧಾನದ ೩೩೦ ಮತ್ತು ೩೩೨ನೇ ವಿಧಿಗಳಿಗೆ ತಿದ್ದುಪಡಿ ತರಲಾಗುತ್ತಿದ್ದು, ಈ ಮೂಲಕ ಲೋಕಸಭೆಯ ೫೪೩ ಸ್ಥಾನಗಳ ಪೈಕಿ ೧೮೧ ಸ್ಥಾನಗಳನ್ನು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ೪,೧೦೯ ಸ್ಥಾನಗಳ ಪೈಕಿ ೧,೩೭೦ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.