(ವಿಶೇಷ ವರದಿ: ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಸೆ. ೨೦ : ಗಿರಿಜನರು ಶತಮಾನಗಳಿಂದಲೂ ತಮ್ಮ ಬದುಕಿನ ಬಂಡಿ ಸಾಗಿಸಲು ಕೂಲಿಯನ್ನೇ ನಂಬಿ ಆಶ್ರಯಕ್ಕಾಗಿ ಕಾಫಿ ಬೆಳೆಗಾರರ ತೋಟದ ಲೈನ್ಮನೆಗಳಲ್ಲಿ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತ್ತಾ ಬದುಕು ಸಾಗಿಸಿಕೊಂಡು ಇಂದಿಗೂ ಬರುತ್ತಿದ್ದಾರೆ. ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಬಹುತೇಕ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿರಿಜನ ಸಮುದಾಯದವರು ಸ್ವಂತ ಸೂರಿಲ್ಲದೆ ಇಂದಿಗೂ ಗುಡಿಸಲುಗಳಲ್ಲಿ, ಲೈನ್ಮನೆಗಳಲ್ಲಿ ವಾಸವಾಗಿದ್ದಾರೆ. ಪ್ರತಿನಿತ್ಯ ಕೂಲಿಯನ್ನೇ ತಮ್ಮ ಬದುಕಾಗಿಸಿಕೊಂಡಿರುವ ಕುಟುಂಬವು ಇನ್ನೂ ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹಲವು ಸರ್ಕಾರಗಳು ಗಿರಿಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ ಮೂಲ ಭೂತ ಸೌಕರ್ಯಗಳಿಂದ ಸಾಕಷ್ಟು ಆದಿವಾಸಿ ಕುಟುಂಬ ಇದರಿಂದ ವಂಚಿತಗೊAಡಿದೆ. ಪ್ರತಿ ನಾಗರಿಕನಿಗೆ ವಾಸಿಸಲು ಒಂದು ಸೂರು ಬೇಕೆಂಬ ಸರ್ಕಾರದ ಚಿಂತನೆ ಇದ್ದರೂ ಸಾವಿರಾರು ಕುಟುಂಬಗಳು ನಿವೇಶನಕ್ಕಾಗಿ ಅಧಿಕಾರಿಗಳ ಮುಂದೆ ಬೇಡುವ ಪರಿಸ್ಥಿತಿ ಮಾಸಿಲ್ಲ.
ಲೈನ್ಮನೆಯಲ್ಲಿರುವ ಗಿರಿಜನರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದು ಇವರಿಗೊಂದು ತಮ್ಮದೇ ಆದ ಸೂರನ್ನು ಒದಗಿಸಲು ಹೋರಾಟಗಾರ ವೈ.ಬಿ. ಗಪ್ಪು ಮುಂದಾಳತ್ವದಲ್ಲಿ ಬುಡಕಟ್ಟು ಕಾರ್ಮಿಕ ಸಂಘವನ್ನು ಕಳೆದ ೬ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತಂದಿದ್ದಾರೆ. ಸಾವಿರಾರು ಕುಟುಂಬಗಳಿಗೆ ನಿವೇಶನ ನೀಡುವಂತೆ ಹಲವು ಹೋರಾಟ ಗಳನ್ನು, ಪ್ರತಿಭಟನೆಗಳನ್ನು ಹಾಗೂ ಅಹೋರಾತ್ರಿ ಚಳವಳಿಗಳನ್ನು ನಡೆಸುವ ಮೂಲಕ ಜಿಲ್ಲಾಧಿಕಾರಿ ಗಳನ್ನು ಹಾಗೂ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯಾಯಯುತ ಹೋರಾಟದ ಮೂಲಕ ಹಾತೂರು ಗ್ರಾಮ ಪಂಚಾಯಿತಿಯ ಕುಂದ ಬಳಿಯಲ್ಲಿ ಬಸವೇಶ್ವರ ಬಡಾವಣೆ ನಿರ್ಮಿಸಿ ನೂರಕ್ಕೂ ಅಧಿಕ ಕುಟುಂಬಗಳಿಗೆ ಶಾಶ್ವತ ನೆಲೆಸಿಗುವಂತೆ ಮಾಡುವಂತೆ ಇವರ ಹೋರಾಟಕ್ಕೆ ಫಲ ಸಿಕ್ಕಿದೆ.
ಆದಿವಾಸಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಗಿರಿಜನ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಯಾಗಿದ್ದ ಗುರುಶಾಂತಪ್ಪ ವಸತಿ ರಹಿತ ಗಿರಿಜನರಿಗೆ ನಿವೇಶನ ಮಂಜೂರು ಮಾಡುವ ಸಲುವಾಗಿ ಖಾಲಿ ಭೂಮಿಗಾಗಿ ನಿರಂತರ ಶ್ರಮಿಸಿದ್ದರು. ಸರ್ವೆ ಇಲಾಖೆಗೆ ಅಲೆದಾಟ ನಡೆಸಿ ಅಂತಿಮವಾಗಿ ಬಿರುನಾಣಿ ಭಾಗದಲ್ಲಿರುವ ಸರ್ವೆ ನಂ. ೨೨/೨ರಲ್ಲಿ ೭ ಎಕರೆ ಹಾಗೂ ತೆÀರಾಲು
(ಮೊದಲ ಪುಟದಿಂದ) ಗ್ರಾಮದಲ್ಲಿ ಸರ್ಕಾರದ ಹೆಸರಿನಲ್ಲಿರುವ ಸರ್ವೆ ನಂ. ೧೪೭/೨ರಲ್ಲಿ ೨೦ ಎಕರೆ ಹಾಗೂ ಬಿರುನಾಣಿಯಲ್ಲಿರುವ ೭ ಎಕರೆ ಖಾಲಿ ಭೂಮಿಯನ್ನು ಗುರುತಿಸುವ ಮೂಲಕ ತಾಲೂಕು ತಹಶೀಲ್ದಾರ್ರಿಗೆ ಈ ಬಗ್ಗೆ ಪತ್ರ ಬರೆದು ಗಮನ ಸೆಳೆದಿದ್ದರು.
ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳಾದ ಹೊನ್ನೇಗೌಡರೊಂದಿಗೆ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಡಾ. ಬಿ.ಸಿ. ಸತೀಶರವರಿಂದ ಶಿಫಾರಸ್ಸು ಪಡೆದು ಜಾಗವನ್ನು ಮೀಸಲಿಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ಇಲಾಖಾಧಿಕಾರಿಗಳ ನಿರಂತರ ಶ್ರಮದಿಂದ ಸರ್ಕಾರಿ ಜಾಗವು ಜಿಲ್ಲಾಧಿಕಾರಿಗಳ ಆದೇಶದಂತೆ ಕೊಡಗು ಜಿಲ್ಲೆಯ ಗಿರಿಜನರ ವಸತಿ ಸೌಲಭ್ಯಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ೭೧ರ ಅನ್ವಯ ಯೋಜನಾ ಸಮನ್ವಯ ಅಧಿಕಾರಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಕೊಡಗು ಜಿಲ್ಲೆ ಮಡಿಕೇರಿ ಇವರ ಹೆಸರಿಗೆ ಕಾಯ್ದಿರಿಸಿ ಸದರಿ ಜಮೀನನ್ನು ಮಾರ್ಚ್ ೧೬, ೨೦೨೩ರಂದು ಪೊನ್ನಂಪೇಟೆ ತಾಲೂಕು ಗಿರಿಜನ ಅಭಿವೃದ್ಧಿ ಗ್ರಾಮಸ್ಥರ ಸಮ್ಮುಖದಲ್ಲಿ ತೆರಾಲು ಗ್ರಾಮದ ಸರ್ವೆ ನಂ. ೧೪೭/೨ರಲ್ಲಿ ೨೦ ಎಕರೆ ಜಾಗವನ್ನು ಗಿರಿಜನರ ವಸತಿ ಸೌಲಭ್ಯಕ್ಕಾಗಿ ಹಸ್ತಾಂತರ ಮಾಡಲಾಗಿದೆ. ಮುಂದಿನ ಹಂತದಲ್ಲಿ ವಸತಿ ಸೌಲಭ್ಯಕ್ಕೆ ಕ್ರಮವಾಗಬೇಕಾಗಿದೆ.