ಶನಿವಾರಸಂತೆ, ಸೆ. ೨೦: ಶನಿವಾರಸಂತೆಯ ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘ ಲಭ್ಯವಿರುವ ಬಂಡವಾಳವನ್ನು ವ್ಯಾಪಾರ ಹಾಗೂ ಅಭಿವೃದ್ಧಿಗೆ ವಿನಿ ಯೋಗಿಸಿಕೊಂಡು ಖರ್ಚು ಗಳನ್ನು ಮಿತಿಗೊಳಿಸಿ, ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದ್ದು ಪ್ರಸಕ್ತ ಸಾಲಿನಲ್ಲಿ ರೂ. ೧೭,೯೦,೩೪೦ ರಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಜಿ. ಪರಮೇಶ್ ಹೇಳಿದರು.

ಪಟ್ಟಣದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ ೨೦೨೨-೨೩ ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘ ಹಳೆಯ ಸಾಲಗಳನ್ನು ತೀರಿಸಿ, ಸ್ವಂತ ಬಂಡವಾಳದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ಗೊಬ್ಬರ ಕಂಪೆನಿಗಳ ಡೀಲರ್‌ಶಿಪ್ ಪಡೆದುಕೊಂಡಿದ್ದು ಎಲ್ಲಾ ಶಾಖೆಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ.

ಮುಖ್ಯ ಕಚೇರಿ ಹಾಗೂ ಗುಡುಗಳಲೆ ಶಾಖೆಗೆ ಸಿ.ಸಿ. ಕ್ಯಾಮರ ಅಳವಡಿಸಿದ್ದು, ಸಂಘ ಆಧುನಿಕತೆಯತ್ತ ಸಾಗುತ್ತಿದೆ. ಕಚೇರಿಯ ಹಿಂಭಾಗದಲ್ಲಿ ಹೊಸದಾಗಿ ವ್ಯವಸ್ಥಿತವಾದ ಹಾಗೂ ಸುಸಜ್ಜಿತವಾದ ೧೫೦ ಮೆಟ್ರಿಕ್ ಟನ್ ಗೋದಾಮನ್ನು ರೂ. ೭ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು ರಸಗೊಬ್ಬರ ಸ್ಟಾಕ್ ಮಾಡಿಕೊಂಡು ಕಾಲಕಾಲಕ್ಕೆ ಸರಿಯಾಗಿ ಗೊಬ್ಬರ ವಿತರಣೆ ಮಾಡುತ್ತಿದೆ. ಇದೀಗ ಸಂಘದಲ್ಲಿ ೬೫೦ ಮೆಟ್ರಿಕ್ ಟನ್ ಗೋದಾಮನ್ನು ಹೊಂದಿದೆ ಎಂದರು. ಸಂಘ ಅತ್ಯುತ್ತಮವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ೨೦೨೨-೨೩ನೇ ಸಾಲಿನಲ್ಲಿ “ಎ” ತರಗತಿಗೆ ಸಂಘದ ಆಡಿಟ್ ವರ್ಗೀಕರ ಣವಾಗಿರುವುದು ಹೆಮ್ಮೆಯ ವಿಚಾರ. ಸಂಘದ ಸದಸ್ಯರು ರೈತೋಪಯೋಗಿ ವಸ್ತುಗಳನ್ನು ಸಂಘದಲ್ಲೇ ಖರೀದಿಸಿದರೆ ಸಂಘವನ್ನು ಮತ್ತಷ್ಟು ಲಾಭದಾಯಕವಾಗಿ ಮುನ್ನಡೆಸಬಹುದು. ಸಹಭಾಳ್ವೆಯೇ ಸಹಕಾರ ಧ್ಯೇಯ ಎಂದು ಅಧ್ಯಕ್ಷ ಪರಮೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಸದಸ್ಯರ ಮಕ್ಕಳಾದ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಂಜನಾ, ಪ್ರಣಾಮ್, ದಿಶಾ ಹಾಗೂ ಎಸ್‌ಎಸ್‌ಎಲ್‌ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ತ್ರಿಶಾ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು.

ಸದಸ್ಯರಾದ ಮೋಹನ್, ಉಮಾಶಂಕರ್, ಎಸ್.ಪಿ. ರಾಜ, ಮಹಮ್ಮದ್ ಪಾಶ, ಹೆಚ್.ಎಸ್. ಸುಬ್ಬಪ್ಪ, ಆರ್.ಪಿ. ಲಕ್ಷö್ಮಣ್ ಅವರು ಆಹ್ವಾನ ಪತ್ರಿಕೆ ಹಾಗೂ ಲೆಕ್ಕಪತ್ರ ಪರಿಶೋಧನಾ ಪುಸ್ತಕದ ಲೋಪಧೋಷಗಳ ಬಗ್ಗೆ, ಕ್ಷೇಮನಿಧಿ, ನೂತನ ಕಟ್ಟಡ ನಿರ್ಮಾಣ, ಇತ್ಯಾದಿಗಳ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡರು. ನಿರ್ದೇಶಕರಾದ ಎಸ್.ಸಿ. ಶರತ್ ಶೇಖರ್ ಹಾಗೂ ಡಿ.ಬಿ. ಧರ್ಮಪ್ಪ ಸ್ಪಷ್ಟನೆ ನೀಡಿದರು.

“ಡಿವಿಡೆಂಡ್ ಬೇಡ ಊಟದ ಭತ್ಯೆ ಹೆಚ್ಚಿಸಿ, ಸಂಘ ಲಾಭಗಳಿಸಲು ಕಾರಣಕರ್ತರಾದ ಸಿಬ್ಬಂದಿಗೆ ಬೋನಸ್ ನೀಡಿ, ತಾತ್ಕಾಲಿಕ ಸಿಬ್ಬಂದಿಗಳನ್ನು ಖಾಯಂಗೊಳಿಸಿ, ೨೦೨೩-೨೪ರಲ್ಲಿ ಅಮೃತ ಮಹೋತ್ಸವ ಆಚರಣೆ ಮಾಡುವಾಗ ನೂತನ ಕಟ್ಟಡಕ್ಕೆ ವಜ್ರ ಮಹೋತ್ಸವ ಕಟ್ಟಡ ಎಂದು ಹೆಸರಿಡಬೇಕು.

ಸದಸ್ಯರಿಗೆ ವಾರ್ಷಿಕ ಮಹಾಸಭೆ ಸಂದರ್ಭ ಕ್ಯಾಲೆಂಡರ್ ಅಥವಾ ಡೈರಿ ನೀಡಬೇಕು ಎಂದು ಸದಸ್ಯರಾದ ಉಮಾಶಂಕರ್, ಹೆಚ್.ಎಸ್. ಸುಬ್ಬಯ್ಯ, ಎಸ್.ಪಿ. ರಾಜ ಆಗ್ರಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ. ಶಿವರಾಜ್ ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು. ಸಂಘದ ಉಪಾಧ್ಯಕ್ಷ ಬಿ.ಎಸ್. ಮಂಜುನಾಥ್, ನಿರ್ದೇಶಕರಾದ ಎಸ್.ಸಿ. ಶರತ್ ಶೇಖರ್, ಡಿ.ಬಿ. ಧರ್ಮಪ್ಪ, ಹೆಚ್.ವಿ. ಮಹಾಂತಪ್ಪ, ಗಿರಿಜಾ ಕರುಣಾಕರ್, ದೇವಾಂಬಿಕಾ ಮಹೇಶ್, ಎಸ್.ಜೆ. ರವಿಕುಮಾರ್, ಹೆಚ್.ಸಿ. ದೀಪಕ್, ಜಿ.ಬಿ. ಪರಮೇಶ್, ಹೆಚ್.ಎನ್. ಕುಮಾರ್ ನಾಯಕ್, ರಾಮಯ್ಯ, ಸರ್ಕಾರದ ನಾಮ ನಿರ್ದೇಶಕ ಎಸ್.ಎಸ್. ಸಾಗರ್, ಸಿಬ್ಬಂದಿ ಬಿ.ಆರ್. ಹರೀಶ್, ವಿರೂಪಾಕ್ಷ, ಕೆ.ಸಿ. ಜಗದೀಶ್, ಎಸ್.ಎಸ್. ಮಂಜೇಶ್ ಉಪಸ್ಥಿತರಿದ್ದರು.