*ಗೋಣಿಕೊಪ್ಪ, ಸೆ. ೧೪ : ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘವು ೪೯.೫ ಲಕ್ಷ ರೂ. ಲಾಭದಲ್ಲಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ರಾಮಕೃಷ್ಣ ತಿಳಿಸಿದರು.

ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಮಾತನಾಡಿ, ೨೦೨೨-೨೩ನೇ ಸಾಲಿನ ಆಡಿಟ್ ವರದಿ ಎ ತರಗತಿಯಲ್ಲಿದ್ದು, ವಾರ್ಷಿಕವಾಗಿ ೯೨ ಕೋಟಿ ರೂ.ಗಳ ವ್ಯವಹಾರ ನಡೆಸಿದೆ. ಸಾಲ ವಿತರಣೆ, ರಸಗೊಬ್ಬರ, ಕೃಷಿ ಪರಿಕರ ಮಾರಾಟ ಮಾಡಿ, ರೂ. ೪೯.೫ ಲಕ್ಷ ನಿವ್ವಳ ಲಾಭ ಗಳಿಸಿ, ಸದಸ್ಯರಿಗೆ ಶೇ. ೨೪ ಲಾಭಾಂಶ ನೀಡಲಾಗುತ್ತದೆ ಎಂದು ತಿಳಿಸಿದರು.

ಸಂಘದಲ್ಲಿ ೧೨೨೬ ಸದಸ್ಯರಿದ್ದು, ರೂ. ೧.೩೫ ಕೋಟಿ ಪಾಲು ಹಣ, ರೂ. ೧.೯೨ ಕೋಟಿ ಕ್ಷೇಮನಿಧಿ, ಸದಸ್ಯರಿಂದ ರೂ. ೧೨ ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ರೂ. ೨೧ ಕೋಟಿ ದುಡಿಯುವ ಬಂಡವಾಳ, ಸಿಆರ್.ಎಆರ್. ಶೇ. ೨೩ ಇದೆ. ಮರಣ ನಿಧಿ, ಸದಸ್ಯರ ಆರೋಗ್ಯ ನಿಧಿ, ಸಿಬ್ಬಂದಿ ಪಿಂಚಣಿ ನಿಧಿಯಂತೆ ಗ್ರಾಮದ ಸಾಮಾಜಿಕ ಮತ್ತು ಶಾಲೆಗಳ ಕಾರ್ಯಕ್ರಮಗಳಿಗೆ ೧ ಲಕ್ಷ ರೂ. ದೇಣಿಗೆ ನೀಡಲಾಗಿದೆ ಎಂದರು.

ದೇವರಪುರ ಶಾಖೆಯಲ್ಲಿ ಸಂಘದ ಸದಸ್ಯರಿಗೆ ಅಗತ್ಯ ಸೇವೆ ನೀಡಲಾಗುತ್ತಿದ್ದು, ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ಮೂಲಕ ಚುನಾವಣಾ ವೆಚ್ಚ ಉಳಿಸುವಂತೆ ಸದಸ್ಯರು ಸಲಹೆ ನೀಡಿದರು.

ಸಹಕಾರ ಸಂಘದ ಮಾರಾಟ ಅಂಗಡಿಯಿAದ ಸದಸ್ಯರಿಗೆ ಆಹಾರ ಉತ್ಪನ್ನ ಉಡುಗೊರೆಯಾಗಿ ನೀಡಲಾಯಿತು. ಸಂಘದ ಪ್ರತಿಭಾನ್ವಿತ ಮಕ್ಕಳಿಗೆ ಹಿರಿಯ ಸಹಕಾರಿಗಳ ಮೂಲಕ ಸ್ಕಾಲರ್‌ಶಿಪ್ ನೀಡಲಾಯಿತು.

ಉಪಾಧ್ಯಕ್ಷ ಪಾಲೆಕಂಡ ಜೆ. ನಂಜಪ್ಪ, ನಿರ್ದೇಶಕರಾದ ಚೆಕ್ಕೇರ ಎಂ. ಅಚ್ಚಯ್ಯ, ಬೊಳ್ತಂಡ ಬಿ. ಚಂಗಪ್ಪ, ಮನೆಯಪಂಡ ಎಂ. ಮಹೇಶ್, ಎಸ್. ವಿ. ಚಂದ್ರಶೇಖರ್, ಕೆ. ಕೆ. ಪದ್ಮನಾಭ, ಎಚ್. ಬಿ. ಗಣೇಶ್, ಎಚ್. ಎಸ್. ಗೋವಿಂದ, ಎಚ್. ಡಿ. ಲಕ್ಷö್ಮಮ್ಮ, ಜಿ. ಎನ್. ಜಯಮ್ಮ, ಯುವ ಎಂ. ಸವಿತಾ, ಎಂ. ಎ. ಮಂಜುಳ, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ರಮ್ಯ, ಸಿಇಓ ವಿ.ಎಸ್. ಸುಬ್ರಮಣಿ ಇದ್ದರು.