ಕರಿಕೆ, ಸೆ. ೧೩: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ತಲಕಾವೇರಿ, ಪಾಡಿ ಇಗ್ಗುತಪ್ಪ, ಎಮ್ಮೆಮಾಡು ದರ್ಗಾ ಷರೀಫ್ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾದ ಮಡಿಕೇರಿ-ಭಾಗಮಂಡಲ ಹಾಗೂ ನಾಪೋಕ್ಲುಗೆ ಸಂಪರ್ಕಿಸುವ ರಸ್ತೆ ಅಪ್ಪಂಗಳ ಮತ್ತು ಬೆಟ್ಟಗೇರಿ ಬಳಿ ತೀವ್ರವಾಗಿ ಗುಂಡಿ ಬಿದ್ದ ಪರಿಣಾಮ ಯಾತ್ರಾರ್ಥಿಗಳು ನಿತ್ಯ ಓಡಾಡುವ ಬಸ್ ಹಾಗೂ ಇತರೆ ಖಾಸಗಿ ವಾಹನಗಳು ಪರದಾಡುವಂತಾಗಿದೆ. ಕಳೆದ ಹಲವು ವರ್ಷಗಳಿಂದಲೂ ಈ ಮೂರು ನಾಲ್ಕು ನಿಗದಿತ ಜಾಗಗಳಲ್ಲಿ ಡಾಮರೀಕರಣ ಮಾಡಿ ರಸ್ತೆ ದುರಸ್ತಿ ಮಾಡಿದರೂ ಕೆಲ ದಿನಗಳಲ್ಲಿ ಕಿತ್ತು ಹೋಗಿ ಅರ್ಧ ಅಡಿಗಿಂತಲೂ ಹೆಚ್ಚು ಗುಂಡಿಯಾಗಿ ಸುಮಾರು ಐವತ್ತು ಮೀಟರ್ ರಸ್ತೆಯಲ್ಲಿ ವಾಹನ ಓಡಾಡಲು ಪ್ರಯಾಸ ಪಡಬೇಕಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ನೂತನ ತಂತ್ರಜ್ಞಾನ ಬಳಸಿ ರಸ್ತೆ ದುರಸ್ತಿ ಪಡಿಸಿ ವಾಹನ ಸಂಚಾರಕ್ಕೆ ಮುಕ್ತ ಗೊಳಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.