(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಸೆ. ೧೪: ಕೊಡಗಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳ ನಂತರ ತೀವ್ರ ಬರ ಎದುರಾಗಿದೆ. ಇದನ್ನು ಮನಗಂಡ ಕರ್ನಾಟಕ ಸರ್ಕಾರ ಕೊಡಗು ಜಿಲ್ಲೆಯ ಸೋಮವಾರಪೇಟೆ, ವೀರಾಜಪೇಟೆ ಹಾಗೂ ಕುಶಾಲನಗರ ತಾಲೂಕುಗಳನ್ನು ತೀವ್ರ ಬರ ತಾಲೂಕುಗಳ ಪಟ್ಟಿಗೆ ಸೇರಿಸಿದೆ. ಬರಪೀಡಿತ ತಾಲೂಕುಗಳಿಂದ ಪೊನ್ನಂಪೇಟೆ ತಾಲೂಕನ್ನು ಸರ್ಕಾರ ಮೊದಲ ಸುತ್ತಿನಲ್ಲಿ ಪರಿಗಣಿಸದ ಹಿನ್ನೆಲೆಯಲ್ಲಿ ಈ ಭಾಗದ ರೈತರ, ಬೆಳೆಗಾರರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ವರ್ಷಂಪ್ರತಿ ಹೆಚ್ಚು ಮಳೆ ಬೀಳುವ ಪೊನ್ನಂಪೇಟೆ ತಾಲೂಕಿನಲ್ಲಿ ಈ ಬಾರಿ ಮಳೆಯ ಪ್ರಮಾಣ ಕುಸಿತ ಕಂಡಿದ್ದು ಇಲ್ಲಿನ ಬಹುತೇಕ ರೈತರು ಪ್ರಸ್ತುತ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಭತ್ತ ಬೆಳೆಯನ್ನು ಬೆಳೆದಿದ್ದರು. ಮಳೆಯನ್ನೇ ನಂಬಿದ್ದ ರೈತರಿಗೆ ಈ ಬಾರಿ ವರುಣ ಕೃಪೆ ತೋರದ ಕಾರಣ ಬಹುತೇಕ ಭತ್ತ ಬೆಳೆಯುವ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.
ಹಲವು ರೈತರು ಬೆಳೆದ ಭತ್ತ ಬೆಳೆಯನ್ನು ಉಳಿಸಿಕೊಳ್ಳಲು ತಮ್ಮ ತಮ್ಮ ಕೆರೆಗಳಿಂದ ನೀರನ್ನು ಹಾಯಿಸಿ ಭತ್ತ ಬೆಳೆಗೆ ನೀರುಣಿಸಿದ್ದರು. ಅತೀ ಸಣ್ಣ ರೈತರು ಕೆರೆಗಳಿಲ್ಲದ ಹಿನ್ನೆಲೆಯಲ್ಲಿ ಭತ್ತ ಭೂಮಿಯನ್ನು ಹಾಗೆಯೇ ಬಿಟ್ಟಿದ್ದರು. ಇದರಿಂದ ಸಣ್ಣ ರೈತರು ತೀವ್ರ ಕಷ್ಟಕ್ಕೆ ಸಿಲುಕಿದ್ದರು. ವರ್ಷಂಪ್ರತಿ ಪೊನ್ನಂಪೇಟೆ ತಾಲೂಕಿನ ದ.ಕೊಡಗಿನಲ್ಲಿ ನೂರಕ್ಕೂ ಅಧಿಕ ಸೆಂ.ಮೀ. ಮಳೆ ಆಗುತ್ತಿತ್ತು. ಈ ಬಾರಿ ಕೇವಲ ಶೇ.೫೦ಕ್ಕಿಂತ ಕಡಿಮೆ ಮಳೆಯಾಗಿದೆ. ಇದರಿಂದ ಇಲ್ಲಿನ ಕೃಷಿಕರು ಮಳೆಯಿಂದ ವಂಚಿತರಾಗಿದ್ದರು.
ಪೊನ್ನAಪೇಟೆ ತಾಲೂಕಿನ ಬಹುತೇಕ ಪ್ರದೇಶದಲ್ಲಿ ಭತ್ತ ಬೆಳೆಯುವ ರೈತರು ಸೇರಿದಂತೆ ಇನ್ನಿತರ ಕೃಷಿ ಬೆಳೆಯುವ ಬೆಳೆಗಾರರು ಸರ್ಕಾರ ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವುದನ್ನು ಎದುರು ನೋಡುತ್ತಿದ್ದರು. ಇದೀಗ ಸರ್ಕಾರ ರಾಜ್ಯದ ೧೬೧ ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿ ಕೇಂದ್ರಕ್ಕೆ ರಾಜ್ಯದಿಂದ ಶಿಫಾರಸ್ಸು ಮಾಡಿದೆ. ಇದರಲ್ಲಿ ಪೊನ್ನಂಪೇಟೆ ತಾಲೂಕನ್ನು ಕೈ ಬಿಟ್ಟಿರುವುದರಿಂದ ಸಹಜವಾಗಿಯೇ ಈ ಭಾಗದ ರೈತರು ಹಾಗೂ ಬೆಳೆಗಾರರು ಅಸಮಧಾನ ಹೊರ ಹಾಕಿದ್ದಾರೆ. ಪೊನ್ನಂಪೇಟೆ ತಾಲೂಕಿಗೆ ಸರ್ಕಾರ ಮಲತಾಯಿ ಧೋರಣೆ ಮಾಡಿದೆ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊನ್ನಂಪೇಟೆ ತಾಲೂಕಿನ ರೈತರು ಒಂದೆಡೆ ಮಳೆಯಿಲ್ಲದೆ ತೊಂದರೆಗೆ ಸಿಲುಕಿದ್ದರೆ, ಮತ್ತೊಂದೆಡೆ ಇಲ್ಲಿನ ರೈತರು ವನ್ಯ ಜೀವಿಗಳ ಉಪಟಳದಿಂದ ತತ್ತರಿಸಿದ್ದಾರೆ. ಹಿಂಡುಹಿAಡಾಗಿ ಕಾಡಾನೆಗಳು ರೈತರ ಕಾಫಿ ತೋಟದಲ್ಲಿ ನೆಲೆ ನಿಂತು ಅಲ್ಲಿರುವ ಕಾಫಿ, ಕರಿಮೆಣಸು, ಬಾಳೆ, ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಧ್ವಂಸಗೊಳಿಸಿ ತೀವ್ರ ನಷ್ಟ ಮಾಡುತ್ತಿದೆ.