ವೀರಾಜಪೇಟೆ, ಸೆ. ೧೪: ಪಟ್ಟಣದ ಜೈ ಭಾರತ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಗೌರಿ ಗಣೇಶ ಉತ್ಸವದ ಅಂಗವಾಗಿ ತಾ. ೨೮ರಂದು ಗೌರಿ ಗಣೇಶ ವಿಸರ್ಜನಾ ದಿನದಂದು ಕಾರು ನಿಲ್ದಾಣದ ಸಭಾಂಗಣದಲ್ಲಿ ರಾತ್ರಿ ಸಂಗೀತ ರಸಸಂಜೆ ಹಾಗೂ ಸ್ಥಳೀಯ ಪ್ರತಿಭೆಗಳ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್ ಶಿವು ಹೇಳಿದರು.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪ್ರಾರಂಭಗೊAಡು ೨ ವರ್ಷಗಳು ಕಳೆದಿವೆೆ. ಸಂಘದಲ್ಲಿ ೩೦೦ಕ್ಕೂ ಅಧಿಕ ಸದಸ್ಯರಿದ್ದಾರೆ. ಸಂಘದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮ ಮಾಡಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಬಿ.ಕೆ. ಜೀವನ್ ಮಾತನಾಡಿ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಅಂದು ನಡೆಯುವ ರಸಸಂಜೆ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳ ನೃತ್ಯ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಏಳನೇ ತರಗತಿ, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚ ಅಂಕ ಪಡೆದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಗುವುದು. ತಾ. ೨೫ ರೊಳಗೆ ಅಂಕಪಟ್ಟಿಯನ್ನು ಸಂಘಕ್ಕೆ ತಲುಪಿಸಬೇಕು. ಹೆಚ್ಚಿನ ವಿವರಗಳಿಗೆ ೭೦೨೨೩೯೮೨೯೫ / ೯೩೭೯೮೫೪೧೩೭ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಸಂಘದ ಗೌರವ ಅಧ್ಯಕ್ಷ ತೋರೆರ ಕುಟ್ಟಪ್ಪ ಮಾತನಾಡಿ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಳೇಟಿರ ಚುಕ್ಕು ದೇವಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಉದ್ಯಮಿ ವಿಷ್ಣು ರವಿರಾಜ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಖಜಾಂಚಿ ಅರ್ಜುನ್ ತಿಮ್ಮಯ್ಯ, ಸಹಕಾರ್ಯದರ್ಶಿ ಜೇಕೋಬ್ ನರೋನಾ, ಸಂಘಟನಾ ಕಾರ್ಯದರ್ಶಿ ಡೇವಿಡ್, ನಿರ್ದೇಶಕ ಜಗದೀಶ್ ಉಪಸ್ಥಿತರಿದ್ದರು.