ಗೋಣಿಕೊಪ್ಪಲು, ಸೆ. ೧೪: ಬದಲಾದ ಕಾಲಘಟ್ಟದಲ್ಲಿ ಭಾರತ ದೇಶವು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿಯೂ ಹಿಂದುಳಿದಿಲ್ಲ. ಕ್ರೀಡಾಪಟುಗಳು ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಕೊಡಗು ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಈ ದೇಶಕ್ಕೆ ಕ್ರೀಡಾಪಟುಗಳನ್ನು ನೀಡಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆಯ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳ ಲಾಗಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಮಾತನಾಡಿದ ಇವರು ದಸರಾ ಕ್ರೀಡಾಕೂಟಕ್ಕೆ ವಿಶೇಷವಾದ ಗೌರವವಿದ್ದು, ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಭಾಗವಹಿಸುವ ವಿಫುಲ ಅವಕಾಶವಿದೆ. ದಸರಾವು ಈ ದೇಶದ ವಿಶಿಷ್ಟ ಪರಂಪರೆಯಾಗಿದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಜಿಲ್ಲೆಯ ಮೂರು ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಮುಕ್ತಾಯಗೊಳಿಸಿದ್ದೇವೆ. ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ಮಟ್ಟದ ಕ್ರೀಡೆಯು ನಡೆಯುತ್ತಿದೆ. ಹೆಚ್ಚಿನ ಕ್ರೀಡಾಪಟುಗಳು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಶ್ಲಾಘನೀಯ.

ಮುಂದಿನ ಹಂತದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡೆಯನ್ನು ಹಮ್ಮಿಕೊಳ್ಳಲಾಗುವುದು. ಕೊಡಗು ಜಿಲ್ಲೆಯಲ್ಲಿ ಹಾಕಿ, ಜಿಮ್ನೆಸ್ಟಿಕ್ಸ್ ಹಾಗೂ ಯೋಗ ಸ್ಪರ್ಧೆಯು ವಿಭಾಗ ಮಟ್ಟದಲ್ಲಿ ನಡೆಯಲಿದೆ. ರಾಜ್ಯಮಟ್ಟದ ಸ್ಪರ್ಧೆಯು ಅಕ್ಟೋಬರ್ ತಿಂಗಳಿನಲ್ಲಿ ೧೩ ರಿಂದ ೧೫ ರವರೆಗೂ ನಡೆಯಲಿದೆ. ೪ ಹಂತದಲ್ಲಿ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಗ್ರಾಮೀಣ ಮಟ್ಟದಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ತಾಲೂಕು ಮಟ್ಟದಿಂದ ಕ್ರೀಡೆಯನ್ನು ಆಯೋಜಿಸಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ತರಬೇತುದಾರ ರಾದ ಕೆ.ಕೆ. ಬಿಂದಿಯ, ಮಂಜುನಾಥ್, ಗಣಪತಿ, ಕುಪ್ಪಂಡ ಸುಬ್ಬಯ್ಯ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಥ್ಲೆಟಿಕ್ಸ್ ತರಬೇತುದಾರ ರಾದ ಮಹಾಬಲ ಸ್ವಾಗತಿಸಿ, ತರಬೇತುದಾರ ಅಂತೋಣಿ ಡಿಸೋಜ ನಿರೂಪಿಸಿ ಹಾಕಿ ತರಬೇತುದಾರರಾದ ವೆಂಕಟೇಶ್ ವಂದಿಸಿದರು. ಕ್ರೀಡಾ ಕೂಟದಲ್ಲಿ ತಾಲೂಕಿನ ವಿವಿಧ ಭಾಗ ದಿಂದ ನೂರಾರು ಕ್ರೀಡಾಪಟುಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಅಥ್ಲೆಟಿಕ್ಸ್ ತರಬೇತಿದಾರರು ದೈಹಿಕ ಶಿಕ್ಷಕರು, ತೀರ್ಪುಗಾರರು, ಉಪಸ್ಥಿತರಿದ್ದರು.