ಮಡಿಕೇರಿ, ಸೆ. ೧೩: ದೇಶಕ್ಕೆ ಸ್ವಾತಂತ್ರ್ಯ ಬಂದು ೮೦ ವರ್ಷಗಳು ತುಂಬುತ್ತಾ ಬಂದರೂ ಕೂಡ ಅಬಲರಿಗೆ, ಅನಾಥರಿಗೆ, ಆರ್ಥಿಕವಾಗಿ ಹಿಂದುಳಿದ ಕಡು ಬಡ ಮಂದಿಗೆ ಸುವ್ಯವಸ್ಥಿತ ಸೂರುಗಳನ್ನು ಕಲ್ಪಿಸಲು ನಮ್ಮ ಆಡಳಿತ ವ್ಯವಸ್ಥೆಗೆ ಇದೂವರೆಗೂ ಸಾಧ್ಯವಾಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಬ್ಯಾಡಗಟ್ಟದ ಪರಿಶಿಷ್ಟ ವರ್ಗ ಮತ್ತು ಪಂಗಡದವರು ನೆಲೆಸಿರುವ ಕಾಲೋನಿಯಲ್ಲಿ ಕಳೆದ ನಲವತ್ತು ವರ್ಷಗಳ ಹಿಂದೆ ನಿರ್ಮಿಸಿಕೊಂಡಿದ್ದ ಮಣ್ಣಿನ ಮನೆ ಬಿರುಕುಗೊಂಡು ಬೀಳುವ ಸ್ಥಿತಿಯಲ್ಲಿ ಇದ್ದರೂ ಕೂಡ, ಅದೇ ಮನೆಯಲ್ಲಿ ವಯೋವೃದ್ದರಾದ ಕರಿಯಯ್ಯ ಹಾಗೂ ಸಣ್ಣಮ್ಮ ದಂಪತಿ ಹಾಗೂ ಅವರ ಅವಲಂಬಿತ ಪರಿವಾರದವರು ವಾಸವಾಗಿದ್ದಾರೆ. ಬಿದ್ದು ಹೋಗುವ ಮನೆಯ ಚಿತ್ರ ತೋರಿಸಿ ಬದಲೀ ಮನೆ ನಿರ್ಮಿಸಿಕೊಡಿ ಎಂದು ಗ್ರಾ.ಪಂ.ಗೆ ಹತ್ತಾರು ವರ್ಷಗಳಿಂದ ನೂರಾರು ಬಾರಿ ಅಲೆದರೂ ಕೂಡ ಆಡಳಿತಾರೂಢರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ನೊಂದ ಕುಟುಂಬದ ಈ ಮಂದಿ ನೋವು ವ್ಯಕ್ತಪಡಿಸಿದ್ದಾರೆ. ಮಳೆ ಬಂದಾಗ ಮಳೆಯ ನೀರಿನ ರಕ್ಷಣೆ ಪಡೆಯಲು ಕೂಲಿ ಮಾಡಿ ತಂದ ಹಣ ಕೊಟ್ಟು ಪ್ಲಾಸ್ಟಿಕ್ ಹೊದಿಕೆ ಹಾಕಿ ಕೊಂಡಿದ್ದೇವೆ. ಜೋರು ಗಾಳಿ ಬೀಸಿ ದಪ್ಪನೆಯ ಮಳೆ ಬಂದರೆ ಯಾವಾಗ ಬೇಕಾದರೂ ಈ ಮನೆ ಬೀಳಬಹುದು. ಕೂಡಲೇ ಇತ್ತ ಆಗಮಿಸಿ ನಮ್ಮ ಸ್ಥಿತಿ ಪರಿಶೀಲಿಸಿ ಸೂಕ್ತ ಸೂರು ಕೊಡುವ ಮೂಲಕ ನ್ಯಾಯ ಕಲ್ಪಿಸಿ ಎಂದು ಕರಿಯಯ್ಯ ಹಾಗೂ ಸಣ್ಣಮ್ಮ ವಯೋವೃದ್ಧ ದಂಪತಿ ಜಿಲ್ಲಾಡಳಿತವನ್ನು ಕೋರಿಕೊಂಡಿದೆ.