ಮಡಿಕೇರಿ, ಸೆ. ೧೨ : ಗಣೇಶೋತ್ಸವದ ಸಡಗರ ನಾಡಿನಲ್ಲಿ ಮನೆ ಮಾಡುತ್ತಿದೆ. ವಿಘ್ನ ನಿವಾರಕ ವಿನಾಯಕನ ಸ್ಮರಣೆ ಜೋರಾಗುತ್ತಿದೆ. ಹಬ್ಬದ ವಾತಾವರಣವೂ ಸೃಷ್ಟಿಯಾಗಿದೆ. ಅದೇ ರೀತಿ ಉತ್ಸವದ ವಿಶೇಷ ಆಕರ್ಷಣೆಯಾದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯ ಮಡಿಕೇರಿ ಹಾಗೂ ಕೊಡ್ಲಿಪೇಟೆಯಲ್ಲಿ ಕಲಾವಿದರ ಕರಗಳಲ್ಲಿ ಸುಂದರ ಗಣೇಶ ಮೂರ್ತಿಗಳು ಅರಳುತ್ತಿದ್ದು, ಅಂತಿಮ ಹಂತದ ಸ್ಪರ್ಶ ನೀಡುವಲ್ಲಿ ಕಲಾವಿದರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಗೌರಿ-ಗಣೇಶ ಹಬ್ಬದ ಸಂಭ್ರಮ ರಾಜ್ಯದಲ್ಲಿ ಮನೆ ಮಾಡಿದ್ದು, ಕೊಡಗು ಜಿಲ್ಲೆಯಲ್ಲಿಯೂ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಸಮಿತಿಗಳು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಸರ್ಜಿಸುತ್ತಾರೆ. ಇದಕ್ಕೆ ತಿಂಗಳುಗಟ್ಟಲೆ ಕೆಲಸ ಮಾಡುತ್ತಾರೆ. ಕೊಡಗಿನಲ್ಲಿ ಬೆರಳೆಣಿಕೆ ಮೂರ್ತಿ ತಯಾರಕರಿದ್ದು, ಸೀಮಿತ ಮಾರುಕಟ್ಟೆ ವ್ಯಾಪ್ತಿಯಲ್ಲಿ ಲಾಭ-ನಷ್ಟದ ಲೆಕ್ಕ ಹಾಕದೆ ಗಣೇಶೋತ್ಸವಕ್ಕೆ ಮೂರ್ತಿ ನೀಡಬೇಕೆಂಬ ಸದುದ್ದೇಶದಿಂದ ತಯಾರಿಕೆಯಲ್ಲಿ ತಮ್ಮನ್ನು ತಾವು ಶ್ರದ್ಧಾಪೂರ್ವಕವಾಗಿ ತೊಡಗಿಸಿಕೊಳ್ಳುತ್ತಾರೆ.

ಮಂಜಿನ ನಗರಿಯಲ್ಲಿ ಗಣಪನ ತಯಾರಿ

ಮಂಜಿನ ನಗರಿ ಮಡಿಕೇರಿಯ ಗೌಡ ಸಮಾಜ ರಸ್ತೆಯ ಕಲಾ ನಗರದಲ್ಲಿ ರವೀಂದ್ರ ಹಾಗೂ ಪ್ರಜ್ವಲ್ ಎಂಬವರು ಗಣೇಶ ತಯಾರಿಯಲ್ಲಿ ನಿರತರಾಗಿದ್ದು, ಕೊಡ್ಲಿಪೇಟೆಯಲ್ಲಿ ನಾಗೇಶ್ ಎಂಬವರು ಕೂಡ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಮಡಿಕೇರಿಯ ಕಲಾವಿದರುಗಳು ಮಂಗಳೂರಿನಿAದ ಮಣ್ಣು ತರಿಸಿಕೊಂಡಿದ್ದು, ಅದರಿಂದ ಗಣಪನನ್ನು ತಯಾರು ಮಾಡುತ್ತಿದ್ದಾರೆ. ಮಣ್ಣಿಗೆ ಕೆಜಿಗೆ ತಲಾ ರೂ. ೪೮ ವೆಚ್ಚ ತಗುಲಿದೆ. ‘ಪ್ಲಾಸ್ಟರ್ ಆಫ್ ಪ್ಯಾರಿಸ್’ ಬಳಸದೆ ರಾಸಾಯನಿಕ ವಸ್ತು ಬಳಸದೆ ಮಣ್ಣಿನಿಂದಲೇ ಮೂರ್ತಿಗಳನ್ನು ತಯಾರಿಸುತ್ತಿರುವುದು ಗಮನಾರ್ಹವಾಗಿದೆ.

ವಿವಿಧ ಭಂಗಿಯ ಮೂರ್ತಿಗಳನ್ನು ಕಲಾವಿದರು ಮಾಡುತ್ತಿದ್ದು, ಸಮಿತಿಗಳಿಗೆ ಬೇಕಾದ ಶೈಲಿಯಲ್ಲಿ ಕೆತ್ತಿದ್ದಾರೆ. ಹುಲ್ಲಿನಿಂದ ಮೂರ್ತಿ ರೂಪಕ ಮಾಡಿ ಅದರ ಮೇಲೆ ಮಣ್ಣನ್ನು ಮೆತ್ತಿ, ಆನಂತರ ಅದರ ಮೇಲೆ ಬಿಳಿ ಸಿಮೆಂಟ್ (ಪುಟ್ಟಿ) ಹಾಕಿ ನಂತರ ಅದಕ್ಕೆ

(ಮೊದಲ ಪುಟದಿಂದ) ‘ಸ್ಯಾಂಡ್ ಪೇಪರ್’ನಲ್ಲಿ ಆಕಾರ ನೀಡಿ ಕೊನೆಗೆ ಕುಂಚದಲ್ಲಿ ಬಣ್ಣದ ಸ್ಪರ್ಶ ನೀಡಲಾಗುತ್ತಿದೆ.

ಹಿರಿಯ ಕಲಾವಿದ ರವೀಂದ್ರ

ಕಳೆದ ೨೫ ವರ್ಷಗಳಿಂದ ಈ ಕಾಯಕದಲ್ಲಿರುವ ಪಿ.ಎ. ರವೀಂದ್ರ ಅವರು ಈ ಬಾರಿ ಮಡಿಕೇರಿಯ ವಿವಿಧ ಸಮಿತಿಗಳಿಗೆ ಬೇಕಾದ ೫ ಗಣೇಶ ಮೂರ್ತಿಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಮಡಿಕೇರಿಯ ಶಾಂತಿನಿಕೇತನ ಸಮಿತಿಯ ಮಂಟಪಕ್ಕೆ ಬೇಕಾದ ಎಲ್ಲಾ ವಿಗ್ರಹಗಳನ್ನು ತಯಾರಿ ಸುವುದರಲ್ಲಿ ನಿರತರಾಗಿದ್ದಾರೆ.

ಕಳೆದ ೧೫ ದಿನಗಳಿಂದ ಈ ಕಾಯಕದಲ್ಲಿ ತೊಡಗಿಕೊಂಡಿದ್ದು, ಅಪ್ಪನ ಕಾಲದಿಂದಲೂ ಈ ಕೆಲಸ ಮಾಡುತ್ತಿದ್ದೇನೆ. ತಂಡವಾಗಿ ಲಾಭ-ನಷ್ಟದ ಲೆಕ್ಕ ಹಾಕದೆ ದೇವರ ಕೆಲಸವೆಂದು ಮಾಡುತ್ತಿದ್ದೇವೆ. ಕನಿಷ್ಟ ೫ ಸಾವಿರದಿಂದ ಗರಿಷ್ಠ ೨೦ ಸಾವಿರ ತನಕ ಮೌಲ್ಯದ ಮೂರ್ತಿಯನ್ನು ಈ ಬಾರಿ ತಯಾರು ಮಾಡಿದ್ದೇನೆ. ಬೇರೆ ಕೆಲಸಗಳನ್ನು ಮಾಡುತ್ತ ಈ ಕೆಲಸಕ್ಕೂ ಸಮಯ ನೀಡುತ್ತಿದ್ದೇನೆ ಎಂದು ರವೀಂದ್ರ ‘ಶಕ್ತಿ’ಗೆ ತಿಳಿಸಿದ್ದಾರೆ.ಯುವ ಕಲಾವಿದ ಪ್ರಜ್ವಲ್

೨೧ ವರ್ಷ ಪ್ರಾಯದ ಪ್ರಜ್ವಲ್ ಈ ಬಾರಿ ಮನಮೋಹಕವಾಗಿ ೪ ಗಣೇಶ ಮೂರ್ತಿಗಳನ್ನು ಅನಾವರಣ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಈತ ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುತ್ತ ಕಲೆಯಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ.

ಕಲಾ ನಗರದ ತಮ್ಮ ಮನೆಯ ಮುಂಭಾಗದಲ್ಲಿ ಶೆಡ್ ಮಾಡಿಕೊಂಡು ೩೪ ವಿನಾಯಕ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ೪ ಜನ ಸ್ನೇಹಿತರೊಂದಿಗೆ ಈ ಕೆಲಸ ಮಾಡುತ್ತಿದ್ದು, ಕಳೆದ ೩ ವರ್ಷಗಳಿಂದ ಮೂರ್ತಿಗಳ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಬಾರಿ ಕನಿಷ್ಟ ೧೩ ಸಾವಿರದಿಂದ ಗರಿಷ್ಠ ೨೮ ಸಾವಿರ ಮೌಲ್ಯದ ಮೂರ್ತಿಗಳನ್ನು ತಯಾರಿಸಿದ್ದಾನೆ.

ಈ ಬಗ್ಗೆ ಮಾತನಾಡಿದ ಪ್ರಜ್ವಲ್, ತಾನು ದುಡ್ಡಿನ ಆಸೆಯಿಂದ ಕೆಲಸ ಮಾಡುತ್ತಿಲ್ಲ. ಅನುಭವ ಪಡೆಯುವ ನಿಟ್ಟಿನಲ್ಲಿ ಮಾಡುತ್ತಿದ್ದೇನೆ. ಸೀಮಿತ ಅವಧಿಯಲ್ಲಿ ಮೂರ್ತಿ ತಯಾರಿಕೆ ಮಾಡುತ್ತಿದ್ದೇನೆ. ಬೆಳಿಗ್ಗೆ ಕೆಲಸಕ್ಕೆ ತೆರಳಿ ಸಂಜೆಯಿAದ ಬೆಳಿಗ್ಗೆ ೩ ಗಂಟೆಯ ತನಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಮೂರ್ತಿಗೆ ಮಣ್ಣು ಮೆತ್ತುವ ಸಂದರ್ಭ ಮಡಿಕೇರಿಯಲ್ಲಿ ವಿಪರೀತ ಬಿಸಿಲಿತ್ತು. ಇದರಿಂದ ಬೇಗ ಒಣಗಿ ಸುಂದರ ಆಕಾರ ನೀಡಲು ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು. ಈ ನಡುವೆಯೂ ಕೈಲಾದಷ್ಟು ಸಮಿತಿಯವರಿಗೆ ತೃಪ್ತಿದಾಯಕ ಮೂರ್ತಿ ಮಾಡಿದ್ದೇನೆ. ಬಣ್ಣ ಹಾಕುವವರೆಗೂ ಮಣ್ಣು ಮೃದುವಾಗಿದ್ದರೆ, ಗಣೇಶ ಮೂರ್ತಿ ಮತ್ತಷ್ಟು ಆಕರ್ಷಕವಾಗುತ್ತದೆ ಎಂದು ಪ್ರಜ್ವಲ್ ‘ಶಕ್ತಿ’ಯೊಂದಿಗೆ ತನ್ನ ಅನಿಸಿಕೆ ಹಂಚಿಕೊAಡಿದ್ದಾನೆ.

ಹೆಚ್.ಜೆ. ರಾಕೇಶ್