ಕುಶಾಲನಗರ, ಸೆ. ೧೨: ರಾಜ್ಯ ಸರ್ಕಾರ ಕೊಡಗು ವಿಶ್ವವಿದ್ಯಾಲಯ ಸೇರಿದಂತೆ ನೂತನ ಎಂಟು ವಿವಿಗಳನ್ನು ರದ್ದುಗೊಳಿಸುವ ಚಿಂತನೆ ಮತ್ತು ರೈತ ವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಸಚಿವರಾದ ಎಂ ಪಿ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆ ಕುಶಾಲನಗರದಲ್ಲಿ ನಡೆಯಿತು.

ಕುಶಾಲನಗರ ಗಣಪತಿ ದೇವಾಲಯ ಮುಂಭಾಗದಿAದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಥ ಬೀದಿಯ ಮೂಲಕ ತೆರಳಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಎಂ.ಪಿ. ಅಪ್ಪಚ್ಚು ರಂಜನ್, ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ರೈತರ ಅನುಕೂಲಕ್ಕೆ ಘೋಷಣೆ ಮಾಡಿದ್ದ ಯೋಜನೆಗಳನ್ನು ರದ್ದುಗೊಳಿಸಿದೆ. ಇದರಿಂದ ರೈತಾಪಿ ವರ್ಗಕ್ಕೆ ಅನಾನುಕೂಲ ಉಂಟಾಗಿದೆ ಎಂದರಲ್ಲದೆ ಕ್ಷೇತ್ರದ ಅಭಿವೃದ್ಧಿಗೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲೆಂದು ಜಿಲ್ಲೆಗೊಂದು ವಿಶ್ವವಿದ್ಯಾಲಯ ಎನ್ನುವ ಯೋಜನೆ ಕಾರ್ಯಗತಗೊಂಡಿದ್ದು, ಇದೀಗ ಕೊಡಗು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ನೂತನ ಎಂಟು ವಿಶ್ವವಿದ್ಯಾಲಯಗಳನ್ನು ರದ್ದುಗೊಳಿಸುವ ಚಿಂತನೆಯನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ರದ್ದು ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ರಂಜನ್ ಆಗ್ರಹಿಸಿದರು. ಕೊಡಗು ವಿವಿಯ ಅಭಿವೃದ್ಧಿಗೆ ತಕ್ಷಣ ಹಣ ಬಿಡುಗಡೆಗೊಳಿಸುವಂತೆ ಅವರು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ ಸರ್ಕಾರದ ಧೋರಣೆಗಳನ್ನು ಖಂಡಿಸಿದರು. ಈ ಸಂದರ್ಭ ಪ್ರಮುಖರಾದ ಎಂ.ಎನ್. ಕುಮಾರಪ್ಪ, ಜಿ.ಎಲ್. ನಾಗರಾಜ್, ಎಂ.ವಿ. ನಾರಾಯಣ್, ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಉಮಾಶಂಕರ್, ಗೌತಮ್, ಜಯವರ್ಧನ್, ಬೋಸ್ ಮೊಣ್ಣಪ್ಪ, ರೂಪ ಉಮಾ ಶಂಕರ್, ವೇದಾವತಿ, ರುಕ್ಮಿಣಿ, ಶೋಭಾ ಪ್ರಕಾಶ್, ಪ್ರವೀಣ್ ಮತ್ತಿತರರು ಇದ್ದರು.