ಪೊನ್ನAಪೇಟೆ, ಸೆ. ೧೨: ಪ್ರಸ್ತುತ ಸನ್ನಿವೇಶದಲ್ಲಿ ಎಷ್ಟೇ ಹಣವಂತರಾಗಿದ್ದರೂ, ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಮನಸು ಇರುವವರು ವಿರಳವಾಗಿರುತ್ತಾರೆ. ಅಂತಹವರ ನಡುವೆ ತಾವು ದುಡಿದು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ೫ ಜನ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಪಾವತಿಸುವ ಮೂಲಕ ಸಂದೀಪ್ ಮತ್ತು ಸ್ಮಿತಾ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ.
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದಿರುವ ೩ ವಿದ್ಯಾರ್ಥಿಗಳು, ಅಪಘಾತದಲ್ಲಿ ಗಾಯಗೊಂಡಿದ್ದ ಒಬ್ಬಳು ವಿದ್ಯಾರ್ಥಿನಿ ಹಾಗೂ ಒಬ್ಬ ವಿಶೇಷಚೇತನ ವಿದ್ಯಾರ್ಥಿ ಸೇರಿದಂತೆ ಒಟ್ಟು ಐವರು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳಾಗಿರುವ ಸಂದೀಪ್ ಮತ್ತು ಸ್ಮಿತಾ ದಂಪತಿ ಕಾಲೇಜು ಶುಲ್ಕ ಕಟ್ಟಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಈ ದಂಪತಿ ಪ್ರಸ್ತುತ ಗೋಣಿಕೊಪ್ಪಲುವಿನಲ್ಲಿ ವಾಸವಾಗಿದ್ದು, ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕೆ.ಪಿ. ಬೋಪಣ್ಣ ಅವರ ಕೋರಿಕೆಯ ಮೇರೆಗೆ ಐವರು ವಿದ್ಯಾರ್ಥಿಗಳಿಗೆ ಒಂದು ವರ್ಷದ ಸಂಪೂರ್ಣ ಶುಲ್ಕ ಪಾವತಿಗಾಗಿ ರೂ.೧,೪೯,೨೩೪ರಷ್ಟು ಮೊತ್ತದ ಹಣವನ್ನು ನೆರವು ನೀಡಿದ್ದಾರೆ. ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಾದ ಟಿ.ಯು.ಲೌಕಿಕ, ಟಿ.ಎಂ.ಕಾಡಿಜತ್ ಜಾಸ್ಮಿನ್, ಬಿ.ಪಿ.ಜಯಶ್ರೀ, ವಿ.ಎಸ್.ತರುಣ್, ವಂಶಿ ಎಂಬ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿರುವ ದಂಪತಿ, ಈ ಐವರು ವಿದ್ಯಾರ್ಥಿಗಳ ಪದವಿ ಶಿಕ್ಷಣ ಮುಗಿಯುವವರೆಗೂ ಶುಲ್ಕವನ್ನು ಪಾವತಿಸುವುದಾಗಿ ತಿಳಿಸಿದ್ದು, ಶಿಕ್ಷಣದ ನಂತರ ಅವರಿಗೆ ಉದ್ಯೋಗ ಕೊಡಿಸುವುದಾಗಿ ತಿಳಿಸಿದ್ದಾರೆ. ದಂಪತಿಯ ಈ ಮಾನವೀಯ ಕಾರ್ಯಕ್ಕೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ಚನ್ನನಾಯಕ