ಸೋಮವಾರಪೇಟೆ, ಸೆ. ೧೦: ಬುದ್ಧ, ಬಸವ, ಅಂಬೇಡ್ಕರ್ ಅವರ ಕನಸಿನಂತೆ ಸಮಾನತೆಯ ಸಮಾಜ ನಿರ್ಮಾಣ ಇಂದಿನ ಅಗತ್ಯತೆಯಾಗಿದೆ ಎಂದು ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಪೀಠಾಧ್ಯಕ್ಷರಾದ ಶ್ರೀ ಬಸವಪ್ರಭು ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಶ್ರೀ ಜಗದ್ಗುರು ಮುರುಘ ರಾಜೇಂದ್ರ ಎಸ್ಟೇಟ್ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಬೇಳೂರು ಬಸವನಹಳ್ಳಿ ಮತ್ತು ಕುಸುಬೂರು ಗ್ರಾಮದ ವತಿಯಿಂದ ಬೇಳೂರು ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಲಿಂಗೈಕ್ಯ ಶ್ರೀ ಜಯಾನಂದ ಸ್ವಾಮೀಜಿ ಸಂಸ್ಮರಣೋತ್ಸವ ಹಾಗೂ ಗದ್ದುಗೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಾಂತಿ, ನೆಮ್ಮದಿಯ ಬದುಕಿನ ಜಾತ್ಯಾತೀತ ಸಮಾಜ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎನ್ನುವ ಸಮಾಜದ ಕಲ್ಪನೆಯನ್ನು ಮಹಾನ್ ದಾರ್ಶನಿಕರು ಕಂಡಿದ್ದರು. ಅವರ ಕನಸು ಸಾಕಾರಗೊಳ್ಳಬೇಕಾದರೆ ಸಮಾನತೆಯ ಸಮಾಜ ನಿರ್ಮಾಣವಾಗಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಶಾಸಕ ಮಂಥರ್ ಗೌಡ ಮಾತನಾಡಿ, ಈ ಸಮಾಜಕ್ಕೆ ಮಠಮಾನ್ಯಗಳ ಕೊಡುಗೆ ಅಪಾರವಾದದ್ದು. ಶಿಕ್ಷಣ, ದಾಸೋಹಗಳ ಮೂಲಕ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಶೀಮಂತಗೊಳಿಸುವಲ್ಲಿ ಮಠ ಮಾನ್ಯಗಳ ಪಾತ್ರ ಹಿರಿದು ಎಂದು ಬಣ್ಣಿಸಿದರು. ಕೊಡಗಿನ ಮಠಗಳ ಅಭಿವೃದ್ಧಿಗೆ ಸರಕಾರ ಹಾಗೂ ವೈಯಕ್ತಿಕವಾಗಿಯೂ ಸಹಕರಿಸು ವುದಾಗಿ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾವಂದೂರು ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಬೇಳೂರು ಮಠದ ಅಂದಿನ ಸ್ವಾಮೀಜಿಗಳಾಗಿದ್ದ ಜಯಾನಂದ ಸ್ವಾಮೀಜಿ ಶ್ರಮ ಜೀವಿಗಳು. ಮಠದ ಆಸ್ತಿಯನ್ನು ಉಳಿಸಿ ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಸರಳ ವ್ಯಕ್ತಿತ್ವದ ಸ್ವಾಮೀಜಿಗಳು, ತಾವೇ ಸ್ವತಃ ಅಡುಗೆ ತಯಾರಿಸಿ ಭಕ್ತರಿಗೆ ಉಣಬಡಿಸಿ ತೃಪ್ತಿ ಪಡುತ್ತಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ, ಚಿತ್ರದುರ್ಗ ಬೃಹನ್ಮಠದ ಕಿರಿಯ ಶ್ರೀಗಳಾದ ಬಸವಾದಿತ್ಯ ದೇವರು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಗ್ರಾಮದ ವೀರಶೈವ ಲಿಂಗಾಯತ ಸಂಘಟನೆಯ ಅಧ್ಯಕ್ಷ ಬಿ.ಎನ್. ಬಸವರಾಜು ಉಪಸ್ಥಿತರಿದ್ದರು.

ಈ ಸಂದರ್ಭ ಮಠದ ಹಿರಿಯ ಭಕ್ತರಾದ ಜಿ.ಎಸ್.ಪ್ರಭುದೇವ, ಶ್ರೀಕಂಠ, ಭೀಮ, ಹಾಗೂ ಕೆ.ಜಿ.ಸುರೇಶ್ ರವರನ್ನು ಸನ್ಮಾನಿಸಲಾಯಿತು .ನಿವೃತ್ತ ಶಿಕ್ಷಕ ಜೆ.ಸಿ.ಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ, ಕೋಮಲ, ಮಠದ ವ್ಯವಸ್ಥಾಪಕ ಶಶಿಧರ್ ಕಾರ್ಯಕ್ರಮ ನಿರ್ವಹಿಸಿದರು.