ಶನಿವಾರಸಂತೆ, ಸೆ. ೧೦: ಪ್ರತಿ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಸೋಲು-ಗೆಲುವಿಗಿಂತಲೂ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದ್ದು ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಮೂಡಿಸಬೇಕು ಎಂದು ಸಂಪನ್ಮೂಲ ಅಧಿಕಾರಿ ಜಾನ್ ಪಾಲ್ ಹೇಳಿದರು.
ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಸೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಭಕ್ತಿಗೀತೆ, ಅಭಿನಯ ಗೀತೆ, ಛದ್ಮವೇಷ, ಲಘುಸಂಗೀತ, ಮಿಮಿಕ್ರಿ, ಕವನ ವಾಚನ, ಆಶುಭಾಷಣ, ಕ್ಲೆ ಮಾಡೆಲಿಂಗ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆ ಮೆರೆದರು.
ಬೆಸೂರು ಪ್ರೌಢಶಾಲಾ ಮುಖ್ಯಶಿಕ್ಷಕ ರಾಘವೇಂದ್ರ, ನ್ಯಾಯದಳ್ಳ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ಮಂಜುಳಾಮಣಿ, ಮುಖ್ಯಶಿಕ್ಷಕಿ ಲಲಿತಾ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಂಜುಳಾ, ಸದಸ್ಯೆ ಪವಿತ್ರಾ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಕವಿತಾ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಜೆ.ಡಿ.ಸುರೇಶ್, ಪತ್ರಕರ್ತ ಪಿ.ಸಿ.ಫ್ರೆಡ್ಡಿ, ಕೊಡ್ಲಿಪೇಟೆ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ರವೀಶ್ ಉಪಸ್ಥಿತರಿದ್ದರು.