ಮಡಿಕೇರಿ, ಸೆ. ೧೦: ನಗರದ ಚೈನ್‌ಗೇಟ್ ಬಳಿ ಕಾರು ಮತ್ತು ಸರಕಾರಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತು ಕುಶಾಲನಗರ ರಸ್ತೆ ಮೂಲಕ ಚೈನ್‌ಗೇಟ್ ಬಳಿ ಸಾಗುತ್ತಿದ್ದ ಸರಕಾರಿ ಬಸ್ ಚೈನ್‌ಗೇಟ್ ಬಳಿ ಕಾರೊಂದನ್ನು ‘ಓವರ್‌ಟೇಕ್’ ಮಾಡುವ ವೇಳೆಯಲ್ಲಿ ಕುಶಾಲನಗರ ದಿಂದ ಮಡಿಕೇರಿ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಕಾರು ಸಂಪೂರ್ಣ ಜಖಂ ಗೊಂಡಿದ್ದು, ಕಾರು ಚಾಲಕ ಮಡಿಕೇರಿಯ ಸಂಜಯ್ ಹಾಗೂ ಪ್ರವಾಸಿಗರೊಬ್ಬರಿಗೆ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನಿಗೂ ಸಣ್ಣಪುಟ್ಟಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತಗೊಂಡ ಪರಿಣಾಮ ಕುಶಾಲನಗರ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.