ನವದೆಹಲಿ, ಸೆ. ೧೦: ಎರಡು ದಿನಗಳ ಕಾಲ ನವದೆಹಲಿಯಲ್ಲಿ ನಡೆದ ಜಿ೨೦ ಶೃಂಗಸಭೆ ಭಾನುವಾರ ಮುಕ್ತಾಯಗೊಂಡಿದೆ.

ಜಿ ೨೦ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ಮುಂದಿನ ಸಾಲಿಗೆ ವಿಧ್ಯುಕ್ತವಾಗಿ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಿದರು, ಈ ಸಂದರ್ಭ ಬ್ರೆಜಿಲ್ ಅಧ್ಯಕ್ಷರು, ಆರ್ಥಿಕ ಹಿತಾಸಕ್ತಿಗಳ ವಿಷಯದಲ್ಲಿ ಕಾಳಜಿ ವಹಿಸಿರುವ ಭಾರತವನ್ನು ಶ್ಲಾಘಿಸಿದರು. ಬ್ರೆಜಿಲ್ ಅಧಿಕೃತವಾಗಿ ಈ ವರ್ಷದ ಡಿಸೆಂಬರ್ ೧ ರಂದು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಮುಂದಿನ ನವೆಂಬರ್‌ನಲ್ಲಿ ಜಿ ೨೦ರ ವರ್ಚುವಲ್ ಅಧಿವೇಶನ ಆಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದರು. ನವೆಂಬರ್ ವರೆಗೆ ಜಿ -೨೦ ಅಧ್ಯಕ್ಷತೆ ಜವಾಬ್ದಾರಿ ಭಾರತಕ್ಕೆ ಇದೆ.

ಹಸಿರು ಪರಿಸರ ನಿಧಿಗೆ ಬ್ರಿಟನ್ ನೆರವು

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಇಂದು ಹಸಿರು ಪರಿಸರ ನಿಧಿಗೆ ೨ ಬಿಲಿಯನ್ ಡಾಲರ್ ಒದಗಿಸುವುದಾಗಿ ತಿಳಿಸಿದ್ದಾರೆ. ಇದು ಹವಾಮಾನ ಬದಲಾವಣೆ ನಿಭಾ ಯಿಸಲು ವಿಶ್ವಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ದೇಶವೊಂದು ನೀಡಿದ ಅತಿದೊಡ್ಡ ಆರ್ಥಿಕ ನೆರವಾಗಿದೆ. ಹವಾಮಾನ ಬದಲಾವಣೆ ಪರಿಣಾಮಗಳನ್ನು ಎದುರಿಸಲು ದುರ್ಬಲ ಆರ್ಥಿಕ ಸ್ಥಿತಿ ಹೋಗ ಲಾಡಿಸಲು ಒಟ್ಟಾಗಿ ಕೆಲಸ ಮಾಡಲು ಜಿ-೨೦ ನಾಯಕರಿಗೆ ಬ್ರ‍್ರಿಟನ್ ಪ್ರಧಾನಿ ರಿಷಿ ಸುನಕ್ ಕರೆ ನೀಡಿದ್ದಾರೆ. ಔತಣಕೂಟಕ್ಕೆ ಫ್ರಾಕ್ ಧರಿಸಿ ಬಂದಿದ್ದ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇಂದು ಭಾರತೀಯ ಉಡುಗೆ ತೊಟ್ಟು ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ್ದರು. ರಿಷಿ ಸುನಕ್ ಅವರೂ ಜೊತೆಗೂಡಿದ್ದರು.

ಪ್ರಧಾನಿ ಮೋದಿ ಅಭಿಮತ

ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಿ-೨೦ ಶೃಂಗಸಭೆಯಲ್ಲಿ ಒತ್ತಾಯ ಮಾಡಿದ್ದಾರೆ. ವಿಶ್ವ ಸಂಸ್ಥೆಯ ಸದಸ್ಯ ರಾಷ್ಟçಗಳ ಹೆಚ್ಚಳದ ಹೊರತಾಗಿಯೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯರ ಸಂಖ್ಯೆಯು ಅಷ್ಟೇ ಇದೆ, ಅದು ಹೆಚ್ಚಳವಾಗಬೇಕಿದೆ ಎಂದು ಹೇಳುವ ಮೂಲಕ ವಿಶ್ವಸಂಸ್ಥೆಯ ಖಾಯಂ ಸದಸ್ಯ ಸ್ಥಾನಕ್ಕೆ ಭಾರತದ ಇಂಗಿತವನ್ನು ಮತ್ತೊಮ್ಮೆ ವಿಶ್ವ ನಾಯಕರ ಮುಂದೆ ಪ್ರಕಟಿಸಿದ್ದಾರೆ.

ವಿಶ್ವದ ‘ಹೊಸ ವಾಸ್ತವತೆ' ಗಳನ್ನು ‘ಹೊಸ ಜಾಗತಿಕ ರಚನೆ'ಯಲ್ಲಿ ಪ್ರತಿಬಿಂಬಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿ-೨೦ ರಾಷ್ಟçಗಳು ೨೦೩೦ ರ ವೇಳೆಗೆ ಜಾಗತಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲು ಒಪ್ಪಿಕೊಂಡಿವೆ. ಈ ಶತಮಾನದ ಮಧ್ಯದ ವೇಳೆÀಗೆ ಅಂದರೆ ೨೦೫೦ರ ಆಸುಪಾಸಿನಲ್ಲಿ ನಿವ್ವಳ ಕಾರ್ಬನ್ ಶೂನ್ಯ ಸಾಧಿಸುವ ಬಗ್ಗೆಯೂ ಜಿ-೨೦ ಸಮ್ಮೇಳನದಲ್ಲಿ ಚರ್ಚಿಸಲಾಯಿತು.

ಜೋ ಬಿಡನ್ ಅನಿಸಿಕೆ

ಈ ವರ್ಷದ ಜಿ-೨೦ ಶೃಂಗಸಭೆಯು ಹವಾಮಾನ ಬಿಕ್ಕಟ್ಟು, ಸೂಕ್ಷö್ಮತೆ ಮತ್ತು ಸಂಘರ್ಷದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೊ ಬಿಡನ್ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಸಸಿ ಹಸ್ತಾಂತರ

ಕಳೆದ ವರ್ಷ ಜಿ ೨೦ ಶೃಂಗಸಭೆ ಆಯೋಜಿಸಿದ್ದ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಮತ್ತು ಮುಂದಿನ ವರ್ಷ ಜಿ-೨೦ ಶೃಂಗಸಭೆ ಆಯೋಜಿಸುತ್ತಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಅವರು ಭಾನುವಾರ ಹಾಲಿ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲಾ ಒಂದು ಸಸಿಯನ್ನು ಹಸ್ತಾಂತರಿಸಿದರು.

ರಷ್ಯಾ ಅನಿಸಿಕೆ

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-೨೦ ಶೃಂಗಸಭೆ ಹಲವು ವಿಧಗಳಲ್ಲಿ ಮಹತ್ವದ ತಿರುವುಗಳನ್ನೊಳಗೊಂಡ ಸಭೆಯಾಗಿದ್ದು, ಸವಾಲುಗಳನ್ನು ಮೆಟ್ಟಿ ಮುನ್ನಡೆಯಲು ದಾರಿ ತೋರಿಸಿದೆ ಎಂದು ರಷ್ಯಾ ಹೇಳಿದೆ.