ಸೋಮವಾರಪೇಟೆ, ಸೆ. ೯ : ವಿದ್ಯಾಭ್ಯಾಸದೊಂದಿಗೆ ಕ್ರೀಡಾಕ್ಷೇತ್ರ ದಲ್ಲಿಯೂ ತಮ್ಮ ಮಕ್ಕಳ ಆಸಕ್ತಿಯನ್ನು ಗುರುತಿಸಿ, ಅದಕ್ಕೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಪೋಷಕರು ಮಾಡಬೇಕು ಎಂದು ಶಾಸಕ ಡಾ. ಮಂಥರ್ ಗೌಡ ಅಭಿಪ್ರಾಯಿಸಿದರು.

ಕೊಡಗು ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನೇರುಗಳಲೆ ಪ್ರೌಢಶಾಲಾ ಮೈದಾನದಲ್ಲಿ ಆಯೋಜನೆ ಗೊಂಡಿರುವ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಪೋಷಕರು ತಮ್ಮ ಮಕ್ಕಳನ್ನು ಆಟದ ಮೈದಾನದತ್ತ ಕರೆದೊಯ್ಯುವ ಮೂಲಕ, ಅವರಿಗೆ ಕ್ರೀಡೆಯತ್ತಲೂ ಆಸಕ್ತಿ ಬೆಳೆಸಲು ಮುಂದಾಗಬೇಕು. ಶಾಲೆಗಳಲ್ಲಿ ವಾರದಲ್ಲಿ ಒಂದು ಗಂಟೆ ಮಾತ್ರ ಕ್ರೀಡೆಗೆ ಮೀಸಲಿಡುವುದನ್ನು ಬದಲಿಸಿ ಹೆಚ್ಚಿನ ಸಮಯ ನಿಗದಿಗೊಳಿಸಲು ಶಿಕ್ಷಣ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಭಾರತ ಹಾಕಿ ತಂಡದ ಉಪನಾಯಕರಾಗಿದ್ದ ಸೋಮವಾರಪೇಟೆಯ ಎಸ್.ವಿ. ಸುನಿಲ್ ಮತ್ತು ಪ್ರೋ ಕಬಡ್ಡಿ ಆಟಗಾರ ಕೂತಿ ಗ್ರಾಮದ ರತನ್ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಮೆರವಣಿಗೆ ಯಲ್ಲಿ ಸಾಗಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಕೆ. ವಿನೋದ್‌ಕುಮಾರ್ ವಹಿಸಿದ್ದರು. ಮಾಜಿ ಅಧ್ಯಕ್ಷೆ ಕೆ.ಜೆ. ಪುಷ್ಪಾ, ಉದ್ಯಮಿ ವಿ.ಎಂ. ವಿಜಯ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಎ.ಡಿ. ಪದ್ಮಾವತಿ, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಚ್.ಪಿ. ದಿಲೀಪ್, ಕೊಡಗು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ವಿ. ಮಂಜೇಶ್, ಸಮನ್ವ ಯಾಧಿಕಾರಿ ಜಿ.ಎಂ. ಹೇಮಂತ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ ಸೇರಿದಂತೆ ಇತರರು ಇದ್ದರು.