ಸೋಮವಾರಪೇಟೆ, ಸೆ. ೮: ಇಲ್ಲಿನ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘವು ರೂ. ೧೩ ಲಕ್ಷ ಲಾಭದಲ್ಲಿದ್ದು, ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಅಧ್ಯಕ್ಷೆ ಜಲಜಾ ಶೇಖರ್ ಹೇಳಿದರು.

ಸ್ಥಳೀಯ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಸಂಘ ಉತ್ತಮ ವ್ಯವಹಾರ ನಡೆಸುವ ಮೂಲಕ ರೂ. ೧೩ ಲಕ್ಷಕ್ಕೂ ಹೆಚ್ಚಿನ ಲಾಭಗಳಿಸಿ ಸದಸ್ಯರಿಗೆ ಶೇ. ೭ ಲಾಭಾಂಶ ನೀಡುತ್ತಿದೆ. ಈ ಬಾರಿ ಗುಂಪು ಸಾಲ, ಸ್ವ ಸಹಾಯ ಸಂಘಗಳಿಗೆ ಸಾಲ, ದ್ವಿ ಚಕ್ರ ವಾಹನ ಖರೀದಿಗೆ ಸಾಲ, ಗೃಹ ಉಪಯೋಗಿ ವಸ್ತುಗಳ ಖರೀದಿಗೆ ಸಾಲ ನೀಡುತ್ತಿದೆ. ಸದಸ್ಯರು ಹಾಗೂ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಸಾಲಗಳನ್ನು ನೀಡುತ್ತಿದೆ ಎಂದರು.

ಸಭೆಯಲ್ಲಿ ಹಿರಿಯ ಸದಸ್ಯರಾದ ಭಾಗ್ಯ ಜಯರಾಮ್, ವಿಮಲ ರಾಜಗೋಪಾಲ್, ಸಾವಿತ್ರಿ ವಿಶ್ವನಾಥ, ಪಾರ್ವತಿ ಕೆಂಚಪ್ಪ ಹಾಗೂ ಸೋಮವಾರಪೇಟೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ, ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷೆ ರೂಪಾ ಸತೀಶ್ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಜಯಂತಿ ಶಿವಕುಮಾರ್, ನಿರ್ದೇಶಕರುಗಳಾದ ಲೋಕೇಶ್ವರಿ ಗೋಪಾಲ್, ಬೇಬಿ ಚಂದ್ರಹಾಸ್, ಉಮಾ ರುದ್ರಪ್ರಸಾದ್, ಶೋಭಾ ಶಿವರಾಜ್, ಸಂಧ್ಯಾರಾಣಿ ಕೃಷ್ಣಪ್ಪ, ರೂಪಶ್ರೀ ರವಿಶಂಕರ್, ಲೀಲಾವತಿ ನಿರ್ವಾಣಿ, ಕವಿತಾ ವಿರೂಪಾಕ್ಷ, ಬಿ.ಕೆ. ವಿದ್ಯಾ, ದಾಕ್ಷಾಯಣಮ್ಮ, ಎಚ್.ಬಿ. ವೀಣಾಕ್ಷಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎ. ಪೃಥ್ವಿ ಚಂದ್ರಶೇಖರ್ ಇದ್ದರು.