ಮಡಿಕೇರಿ, ಸೆ. ೮: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಸೆ ಗ್ರಾಮದಿಂದ ನಾಪತ್ತೆಯಾಗಿದ್ದ ಮಹಿಳೆಯ ವಸ್ತುಗಳು ನಗರದ ಹೊರವಲಯದ ಅಬ್ಬಿಜಲಪಾತ ಬಳಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಶೋಧ ಕಾರ್ಯ ಕೈಗೊಳ್ಳಲಾಗಿದೆ.

ಮೂಲತಃ ಬಾರಸೆ ಗ್ರಾಮದ ಸರಸ್ವತಿ (೩೨) ಎಂಬಾಕೆ ತಾ. ೫ ರಿಂದ ನಾಪತ್ತೆಯಾಗಿದ್ದು, ಬೆಟ್ಟದಪುರ ಠಾಣೆಯಲ್ಲಿ ಈ ಸಂಬAಧ ಪ್ರಕರಣ ಕೂಡ ದಾಖಲಾಗಿತ್ತು.

ಬಾರಸೆಯಲ್ಲ್ಲಿ ಪತಿ ಕುಮಾರ್ ಅವರೊಂದಿಗೆ ವಾಸಿಸುತ್ತಿದ್ದ ಸರಸ್ವತಿ ಕೌಟುಂಬಿಕ ಕಾರಣದಿಂದ ನೊಂದಿದ್ದರು ಎನ್ನಲಾಗಿದೆ. ತಾ. ೫ ರಂದು ಯಾರಿಗೂ ಹೇಳದೆ ಮನೆಯಿಂದ ಬಂದಿದ್ದರು. ಕುಟುಂಬಸ್ಥರು ಹಾಗೂ ಪೊಲೀಸರು ನಾಪತ್ತೆಯಾದ ಮಹಿಳೆಯ ಪತ್ತೆ ಕಾರ್ಯ ನಡೆಸುತ್ತಿದ್ದರು.

ಅಬ್ಬಿಫಾಲ್ಸ್ ಬಳಿ ಸಾರ್ವಜನಿಕರಿಗೆ ದೊರೆತ ಬ್ಯಾಗ್ ವೊಂದನ್ನು ಪರಿಶೀಲಿಸಿದ ಸಂದರ್ಭ ಡೆತ್‌ನೋಟ್ ಸೇರಿದಂತೆ ಬ್ಯಾಂಕ್ ಪಾಸ್ ಬುಕ್, ಗುರುತಿನ ಚೀಟಿ, ಅಂಕಪಟ್ಟಿ ಪತ್ತೆಯಾಗಿದೆ. ಸ್ಥಳೀಯರು ಈ ವಿಚಾರವನ್ನು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಬೆಟ್ಟದಪುರ ಪೊಲೀಸರನ್ನು ಇಲ್ಲಿನ ಪೊಲೀಸರು ಸಂಪರ್ಕಿಸಿ ಮಾಹಿತಿ ಬಯಸಿದ ಸಂದರ್ಭ ಸರಸ್ವತಿ ನಾಪತ್ತೆಯಾಗಿರುವ ಕುರಿತು ತಿಳಿದು ಬಂದಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸರು ತಕ್ಷಣ ಎಚ್ಚೆತ್ತು ಎನ್.ಡಿ.ಆರ್.ಎಫ್, ಅಗ್ನಿಶಾಮಕ ದಳದವರನ್ನು ಕರೆಸಿ ಜಲಪಾತದಲ್ಲಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ನೀರು ಧುಮುಕುವ ಜಾಗದಿಂದ ೧ ಕಿ.ಮೀ ಕ್ರಮಿಸಿ ಹುಡುಕಾಟ ನಡೆಸಲಾಗಿದೆ. ಆದರೆ, ಯಾವುದೇ ಸುಳಿವು ಲಭ್ಯವಾಗಿಲ್ಲ. ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿ ಸಲಾಗಿದೆ. ಇಂದು ಕಾರ್ಯಾಚರಣೆ ಮುಂದುವರೆ ಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಕೌಟುಂಬಿಕ ಕಾರಣದಿಂದ ಮನನೊಂದಿದ್ದೇನೆ. ಇದರಿಂದ ಬದುಕಲು ಆಗುತ್ತಿಲ್ಲ. ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನನ್ನು ಹುಡುಕಬೇಡಿ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆಯಲಾಗಿದೆ.