ಮಡಿಕೇರಿ,ಸೆ.೬; ಮಡಿಕೇರಿಯ ಮಹದೇವಪೇಟೆ ಪಟ್ಟಣ ಸಹಕಾರ ಬ್ಯಾಂಕ್ ವಿವಿಧ ವ್ಯವಹಾರಗಳೊಂದಿಗೆ ಲಾಭ ಗಳಿಸುವ ಮೂಲಕ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಸಿ.ಕೆ.ಬಾಲಕೃಷ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ೨,೪೯೭ ಮಂದಿ ಸದಸ್ಯರುಗಳನ್ನು ಹೊಂದಿರುವ ಬ್ಯಾಂಕ್ ರೂ.೧೭೫.೯೮ ಲಕ್ಷ ಪಾಲು ಬಂಡವಾಳ ಹೊಂದಿದೆ. ದುಡಿಯುವ ಬಂಡವಾಳವು ರೂ.೫,೦೧೫.೮೩ ಲಕ್ಷವಿದ್ದು ಕಳೆದ ಸಾಲಿಗಿಂತ ರೂ.೫೭೧.೩೫ಲಕ್ಷದಷ್ಟು ಅಧಿಕಗೊಂಡಿದೆ. ರೂ.೪,೪೨೬.೯೯ ಲಕ್ಷ ವಿವಿಧ ಠೇವಣಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ ರೂ.೪೯೬.೪೨ ಲಕ್ಷ ಏರಿಕೆಯಾಗಿದೆ. ರೂ.೪೧೫.೯೪ಲಕ್ಷ ಹಣವನ್ನು ವಿವಿಧ ಬ್ಯಾಂಕುಗಳಲ್ಲಿ ವಿನಿಯೋಗಿಸಲಾಗಿದ್ದು, ಭದ್ರತಾ ಪತ್ರದಲ್ಲಿ ರೂ.೧,೧೪೮.೦೯ಲಕ್ಷದಷ್ಟು ಧನ ವಿನಿಯೋಗಿಸಲಾಗಿದೆ. ಗ್ರಾಹಕರುಗಳಿಗೆ ರೂ.೨,೯೮೩.೬೬ಲಕ್ಷದಷ್ಟು ವಿವಿಧ ರೂಪದಲ್ಲಿ ಸಾಲ ನೀಡಲಾಗಿದ್ದು ಶೇ.೯೫ರಷ್ಟು ಸಾಲ ವಸೂಲಾತಿ ಯಾಗಿದೆ. ೨೦೨೨-೨೩ನೇ ಸಾಲಿಗೆ ಒಟ್ಟಾರೆ ರೂ.೮೧.೨೧ಲಕ್ಷ ಲಾಭ ಗಳಿಸಿದ್ದು, ಆದಾಯ ಮತ್ತು ಇತರ ಬಾಪ್ತುಗಳಿಗೆ ಕಾಯ್ದಿರಿಸಿದ ನಂತರ ರೂ.೩೦.೩೩ಲಕ್ಷ ನಿವ್ವಳ ಲಾಭದೊಂದಿಗೆ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಮಾಹಿತಿ ನೀಡಿದರು. ಬ್ಯಾಂಕ್ ಹೊಂದಿರುವ ಠೇವಣಾತಿಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಡಿಪಾಸಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್‌ನಲ್ಲಿ ವಿಮೆ ಇಳಿಸಲಾಗಿದೆ. ಬ್ಯಾಂಕ್ ತನ್ನ ದ್ರವ್ಯಾಸ್ತಿಯನ್ನು ನಿಗದಿತ ಮಿತಿಯೊಳಗೆ ಕಾಯ್ದುಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಾಖೆಯಲ್ಲೂ ಲಾಭ

ಬ್ಯಾಂಕು ಜ.ತಿಮ್ಮಯ್ಯ ರಸ್ತೆಯಲ್ಲಿ ತನ್ನ ಶಾಖೆ ಹೊಂದಿದ್ದು, ಒಟ್ಟು ರೂ.೧೫೮೭.೭೧ಲಕ್ಷ ವ್ಯವಹಾರ ನಡೆಸಿ ರೂ.೧೫.೭೨ಲಕ್ಷ ಲಾಭ ಗಳಿಸಿದೆ. ರೂ.೯೦೭.೭೩ ಲಕ್ಷ ಠೇವಣಿ ಹೊಂದಿದ್ದು, ರೂ.೬೭೯.೯೮ ಲಕ್ಷದಷ್ಟು ವಿವಿಧ ರೀತಿಯ ಸಾಲ ನೀಡಲಾಗಿದೆ ಎಂದು ತಿಳಿಸಿದರು. ಬ್ಯಾಂಕಿನಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಸಾಲಗಳನ್ನು ನೀಡಲಾಗುತ್ತಿದೆ. ಬ್ಯಾಂಕಿನಲ್ಲಿಡುವ ಠೇವಣಾತಿಗಳಿಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಬ್ಯಾಂಕಿನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹತ್ತನೇ, ಪಿಯುಸಿ ಮತ್ತು ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

೯ರಂದು ಮಹಾಸಭೆ

ಬ್ಯಾಂಕಿನ ೨೦೨೨-೨೩ನೇ ಸಾಲಿನ ಮಹಾಸಭೆ ತಾ.೯ರಂದು ಮಡಿಕೇರಿಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಇರುವ ಚೇತನ ಚಿಲುಮೆ(ಬಾಲ ಭವನ) ಸಭಾಂಗಣದಲ್ಲಿ ನಡೆಯಲಿದೆ ಎಂದು ಬಾಲಕೃಷ್ಣ ತಿಳಿಸಿದರು. ಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಿ.ಎಂ.ರಾಜೇಶ್, ನಿರ್ದೇಶಕರುಗಳಾದ ಎಸ್.ಸಿ.ಸತಿಶ್ ಕುಮಾರ್, ಸತೀಶ್ ಪೈ, ಬಿ.ಕೆ.ಜಗದೀಶ್, ಕನ್ನಂಡ ಸಂಪತ್ ಇದ್ದರು.