ಎಂ.ಸಿ.ನಾಣಯ್ಯ ಒತ್ತಾಯ
ಮಡಿಕೇರಿ, ಸೆ. ೬: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಈ ಬಾರಿ ಕೊಡಗು ಜಿಲ್ಲೆಯವರಿಗೆ ಅವಕಾಶ ನೀಡುವಂತೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಂ.ಸಿ. ನಾಣಯ್ಯ ಆಗ್ರಹಿಸಿದ್ದಾರೆ.
'ಶಕ್ತಿ'ಯೊಂದಿಗೆ ಈ ಕುರಿತು ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದೆ. ಹಲವು ವರ್ಷಗಳಿಂದ ಅಧಿಕಾರ ಕಳೆದುಕೊಂಡಿದ್ದ ಕೊಡಗಿನಲ್ಲಿಯೂ ಕಾಂಗ್ರೆಸ್ ಶಾಸಕರು ಗೆದ್ದು ಅಧಿಕಾರ ಮರುಸ್ಥಾಪಿಸಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ೮ ಕ್ಷೇತ್ರಗಳ ಪೈಕಿ ೫ ಕಡೆಗಳಲ್ಲಿ ಕಾಂಗ್ರೆಸ್ ಶಾಸಕರು ಇರುವ ಕಾರಣದಿಂದ ಗೆಲುವು ಕೂಡ ಈ ಬಾರಿ ಸುಲಭ ಸಾಧ್ಯವಿದೆ. ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ಬಳಿಕ ಕೊಡಗಿನ ಅಭ್ಯರ್ಥಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಆಸಕ್ತಿ ಇರುವ, ಗೆಲ್ಲುವ ಸಾಮರ್ಥ್ಯ ಹೊಂದಿರುವ ಕೊಡಗಿನ ವ್ಯಕ್ತಿಗೆ ಪಕ್ಷ ಅವಕಾಶ ನೀಡಿ ಪ್ರಾತಿನಿಧ್ಯ ನೀಡಬೇಕು. ಅಗತ್ಯವಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.