ವೀರಾಜಪೇಟೆ, ಸೆ. ೬: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಮಹದೇವ್ ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಪ್ರದೀಪ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಮಹದೇವ್ ಅವರು ದೇಶ ಹಾಗು ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಜನ ಸಾಮಾನ್ಯರೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಚುನಾವಣಾ ಸಂದರ್ಭಗಳಲ್ಲಿ ರೈತರಿಗೆ ನೀಡಿರುವ ಆಶ್ವಾಸನೆಗಳು, ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿದೆ ಎಂದರು.
ರಾಜ್ಯ ಸರ್ಕಾರ ಅನ್ನಭಾಗ್ಯದಡಿಯಲ್ಲಿ ಬಿಪಿಎಲ್, ಅಂತ್ಯೋದಯ ಪಡಿತರದಾರರಿಗೆ ನೀಡುವ ತಲಾ ಐದು ಕೆ.ಜಿ ಅಕ್ಕಿಯನ್ನು ತಡೆಹಿಡಿಯಲಾಗಿದೆ. ವಿದ್ಯುತ್ ರಂಗವನ್ನು ಖಾಸಗೀಕರಣಗೊಳಿಸಿ ಬಡವರ ಗೃಹ, ಕೃಷಿಕರ ಪಂಪ್ಸೆಟ್, ಸಣ್ಣ ಕೈಗಾರಿಕೆಗಳಿಗೆ ನೀಡುವ ಸಹಾಯಧನವನ್ನು ರದ್ದು ಮಾಡಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಅದೆಷ್ಟೋ ಸಣ್ಣ ಕೈಗಾರಿಕೆಗಳು ಮತ್ತು ನೀರಾವರಿಗಾಗಿ ಪಂಪ್ಸೆಟ್ಟ್ ಅಳವಡಿಸಿದ್ದ ರೈತರು ಬೀದಿಗೆ ಎಸೆಯಲ್ಪಟ್ಟಿದ್ದಾರೆ. ಕೋಟ್ಯಾಂತರ ಕಾರ್ಮಿಕ ಕುಟುಂಬಗಳು ಉದ್ಯೋಗ ಕಳೆದುಕೊಂಡಿದೆ. ಸರ್ಕಾರ ಖಾಲಿ ಇರುವ ಎಲ್ಲಾ ಉದ್ಯೋಗಳನ್ನು ಈ ಕೂಡಲೆ ಭರ್ತಿ ಮಾಡಬೇಕು. ಗುತ್ತಿಗೆ ಪದ್ಧತಿ ಹಾಗೂ ಗೌರವ ಧನದ ನೌಕರಿಗಳನ್ನು ರದ್ದುಪಡಿಸಬೇಕು.
ಕೇಂದ್ರ ಸರ್ಕಾರ ಧಾನ್ಯಗಳ ಮೇಲೆ ವಿಧಿಸಿರುವ ಜಿಎಸ್ಸ್ಟಿ ತೆರಿಗೆಯನ್ನು ವಾಪಾಸು ಪಡೆಯಬೇಕು. ಕಾಡಾನೆ ಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಆನೆ ಮಾನವ ಸಂಘರ್ಷವನ್ನು ತಡೆಗಟ್ಟಿ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಬೇಕು. ಜಿಲ್ಲೆಯ ಎಲ್ಲಾ ನಿವೇಶನ ರಹಿತರಿಗೆ ಮತ್ತು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಶಾಶ್ವತ ಸೂರು ಒದಗಿಸಿಕೊಡಬೇಕು. ರೈತರ ಎಲ್ಲಾ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ನೀಡುವ ಸಂದರ್ಭ ಅಮ್ಮತ್ತಿ ವಲಯ ಶಾಖಾ ಕಾರ್ಯದರ್ಶಿ ರಮೇಶ್ (ಶಾಜಿ) ವೀರಾಜಪೇಟೆ ಶಾಖೆಯ ಹಮೀದ್ ಬಾಪುಟ್ಟಿ, ಖಾಸಿಂ ಖಾಲಿದ್, ಅಮ್ಮತ್ತಿ ವಲಯ ಶಾಖಾ ಕಾರ್ಯದರ್ಶಿ ರಮೇಶ್ (ಶಾಜಿ) ಮತ್ತಿತರರು ಉಪಸ್ಥಿತರಿದ್ದರು.