ಮಡಿಕೇರಿ, ಸೆ. ೬ : ಕೊಡಗು ಜಿಲ್ಲಾ ಪಂಚಾಯತ್‌ನಲ್ಲಿ ಕಳೆದ ಒಂದು ವರ್ಷಗಳಿಂದ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಜಗದೀಶ್ ಎಸ್.ಮತ್ತು ಅಧೀಕ್ಷಕರಾದ ಪಿ.ಪಿ.ಇಂದಿರಾ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

ನಗರದ ಜಿ.ಪಂ. ಕಚೇರಿ ಸಭಾಂಗಣದಲ್ಲಿ ಜಿ.ಪಂ. ಸಿಇಒ ವರ್ಣಿತ್ ನೇಗಿ ಅವರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಜನಾಧಿಕಾರಿ ಜಗದೀಶ್ ಅವರು ೨೫ ವರ್ಷ ಕಾಲ ಸರ್ಕಾರಿ ಸೇವೆ ಸಲ್ಲಿಸಿದ್ದು ಖುಷಿ ತಂದಿದೆ. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಸಂತಸ ತಂದಿದೆ ಎಂದರು.

ಸರ್ಕಾರಿ ವೃತ್ತಿಯಲ್ಲಿ ಸಮಯ ಪ್ರಜ್ಞೆ ಮತ್ತು ತಾಳ್ಮೆ ಬಹು ಮುಖ್ಯವಾದುದಾಗಿದೆ. ಇವೆರಡನ್ನು ಅಳವಡಿಸಿಕೊಂಡಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು. ಅಧೀಕ್ಷಕರಾದ ಪಿ.ಪಿ. ಇಂದಿರಾ ಅವರು ಮಾತನಾಡಿ, ೩೫ ವರ್ಷಗಳ ಸರ್ಕಾರಿ ವೃತ್ತಿ ಜೀವನ ಸಾಕಷ್ಟು ತೃಪ್ತಿ ತಂದಿದ್ದು, ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳನ್ನು ಸ್ಮರಿಸಿದರು. ಜಿ.ಪಂ. ಸಿಇಒ ವರ್ಣಿತ್ ನೇಗಿ ಅವರು ಮಾತನಾಡಿ, ನಿವೃತ್ತಿ ಎಂಬುದು ಸರ್ಕಾರಿ ನೌಕರರಿಗೆ ಕಡ್ಡಾಯವಾದುದಾಗಿದೆ. ಒತ್ತಡಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿರಬೇಕು ಎಂದರು. ಜಿ.ಪಂ. ಉಪ ಕಾರ್ಯದರ್ಶಿ ಜಿ.ಧನರಾಜು ಅವರು ಮಾತನಾಡಿ ಜಗದೀಶ್ ಅವರೊಂದಿಗೆ ೧೦ ವರ್ಷಗಳ ಒಡನಾಟವಿದೆ ಎಂದರು.

ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಸಹಾಯಕ ಯೋಜನಾಧಿಕಾರಿ ಜೀವನ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ರವೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಇತರರು ಹಾಜರಿದ್ದರು. ಎನ್‌ಆರ್‌ಎಲ್‌ಎಂ ಸಂಜೀವಿನಿ ವಿಭಾಗದ ಗಾಯತ್ರಿ ನಿರೂಪಿಸಿದರು, ಜಿಲ್ಲಾ ಸಂಪನ್ಮೂಲ ಕೇಂದ್ರದ ಆಡಳಿತ ಸಹಾಯಕರಾದ ಗಾಯತ್ರಿದೇವಿ ಪ್ರಾರ್ಥಿಸಿದರು.