ಶನಿವಾರಸಂತೆ, ಸೆ. ೬: ಪತ್ರಕರ್ತ ಹಾಗೂ ಪತ್ರಿಕೆಯ ವಿತರಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪತ್ರಕರ್ತ ಪ್ರತಿನಿತ್ಯ ಸುದ್ದಿ ಮಾಡಿ ಪತ್ರಿಕೆಗೆ ಕಳುಹಿಸಿದರೇ ಪತ್ರಿಕಾ ವಿತರಕ ಮುಂಜಾನೆ ಮನೆಮನೆಗೆ ಪತ್ರಿಕೆ ವಿತರಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವ ಶ್ರಮಜೀವಿ ಎಂದು ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಎನ್.ಬಿ.ನಾಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಲಯನ್ಸ್ ಹುಣಸೂರು ಕಾವೇರಿ ಸಂಭ್ರಮ ಸಂಸ್ಥೆ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಶನಿವಾರಸಂತೆ ವ್ಯಾಪ್ತಿಯ ಪತ್ರಿಕಾ ವಿತರಕ ಕುಮಾರಸ್ವಾಮಿಯವರನ್ನು ಸನ್ಮಾನಿಸಿ ಮಾತನಾಡಿದರು.

ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುವ ಕಾಯಕದ ಶ್ರಮಜೀವಿ ಪತ್ರಿಕಾ ವಿತರಕನ ಜವಾಬ್ದಾರಿ ಹೆಚ್ಚಿದೆ. ಹಲವಾರು ವರ್ಷಗಳಿಂದ ವಿವಿಧ ಜಿಲ್ಲಾ ಹಾಗೂ ರಾಜ್ಯಮಟ್ಟದ ದಿನ ಪತ್ರಿಕಾ ವಿತರಕರಾಗಿರುವ ಕುಮಾರಸ್ವಾಮಿ ಪ್ರತಿದಿನ ಬೆಳಿಗ್ಗೆ ತಮ್ಮ ಕೆಲಸಕಾರ್ಯಗಳನ್ನು ಬದಿಗೊತ್ತಿ ಪತ್ರಿಕೆ ವಿತರಿಸುತ್ತಾ ಜನಮನ್ನಣೆಗೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನಿತ ಕುಮಾರಸ್ವಾಮಿ ಮಾತನಾಡಿ, ನಾನು ನೆರೆ ಜಿಲ್ಲೆಯವನಾದರೂ ಕೊಡಗು ಜಿಲ್ಲೆಯ ಗಡಿಭಾಗ ಶನಿವಾರಸಂತೆ ವ್ಯಾಪ್ತಿಯಲ್ಲಿ ಪತ್ರಿಕಾ ವಿತರಕನಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸಂತೋಷದಾಯಕವಾಗಿದೆ. ಸಂಘಸAಸ್ಥೆಗಳು ಮಾಡುವ ಸನ್ಮಾನ ನಮ್ಮ ಕೆಲಸದಲ್ಲಿ ಉತ್ಸಾಹ ಮೂಡಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಕೆ.ಎಂ.ಕಾರ್ಯಪ್ಪ ಮಾತನಾಡಿ, ಶುಭ ಹಾರೈಸಿದರು. ಖಜಾಂಚಿ ಬಿ.ಕೆ.ಚಿಣ್ಣಪ್ಪ, ನಿರ್ದೇಶಕರಾದ ನಾರಾಯಣ ಸ್ವಾಮಿ, ಡಿ.ಪಿ.ಬೋಜಪ್ಪ, ಬಿ.ಬಿ.ನಾಗರಾಜ್, ಟಿ.ಎನ್.ಕೇಶವಮೂರ್ತಿ, ಮಲ್ಲೇಶ್, ಧರ್ಮಪ್ಪ, ಸದಸ್ಯರು ಇದ್ದರು.