ನಾಪೋಕ್ಲು, ಸೆ. ೬: ಕೊಡಗು ಕೃಷಿ ಪ್ರಧಾನ ಜಿಲ್ಲೆ. ಆದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗ ಕೊಡಗು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಪ್ರವಾಸಿಗರ ಆಗಮನದಿಂದ ರೆಸಾರ್ಟ್ ಹೋಂ ಸ್ಟೇ ನಡೆಸುವವರು ಸ್ವಲ್ಪಮಟ್ಟಿಗೆ ಸಂತಸದಿAದ ಇದ್ದಾರೆ. ಮತ್ತೊಂದೆಡೆ ಪ್ರವಾಸಿಗರ ಮೋಜು ಮಸ್ತಿ ಜಿಲ್ಲೆಯ ಜನತೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂಬ ಆಕ್ಷೇಪಗಳೂ ಇವೆ.
ಪ್ರವಾಸಿಗರನ್ನು ಮೆಚ್ಚಿಸುವ ಕಾರ್ಯಕ್ಕೆ ಸನ್ನದ್ಧರಾಗಿರುವ ಜಿಲ್ಲೆಯ ಜನತೆ ಪ್ರಮುಖವಾದ ಭತ್ತದ ಕೃಷಿಯ ಬಗ್ಗೆ ಅಸಡ್ಡೆ ತೋರುತ್ತಿರುವುದು ಕಂಡುಬರುತ್ತಿದೆ. ಅದರೊಂದಿಗೆ ಜಿಲ್ಲಾಡಳಿತ, ಕೃಷಿ ಇಲಾಖೆ ಕೂಡ ಕೃಷಿಕರ ಸಹಕಾರಕ್ಕೆ ಬಾರದಿರುವದು ಈ ಜಿಲ್ಲೆಯ ಕೃಷಿಕರ ದುರಂತ.
ಇದಕ್ಕೆ ಉದಾಹರಣೆ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ಣಬಲಮುರಿ ಗ್ರಾಮದ ಸಮೀಪದ ಕಾವೇರಿ ನದಿ ದಂಡೆಯಲ್ಲಿ ನೆನೆಗುದಿಗೆ ಬಿದ್ದಿರುವ ಸಣ್ಣ ನೀರಾವರಿ ಇಲಾಖೆಯ ಏತ ನೀರಾವರಿ ಯೋಜನೆ. ಗ್ರಾಮದ ಬೊಳ್ಳರಿಗುಂಡಿ ಎಂಬ ಕಾವೇರಿ ನದಿಯ ದಂಡೆಯಲ್ಲಿ ಸುಮಾರು ೩೦ ವರ್ಷಗಳ ಹಿಂದೆ ನೀರು ಎತ್ತುವ ಯಂತ್ರಗಳ ಅಳವಡಿಕೆ, ಕಟ್ಟಡ, ಅಲ್ಲಿಂದ ಭತ್ತದ ಗದ್ದೆಗಳಿಗೆ ಬೃಹತ್ ಪ್ರಮಾಣದ ಪೈಪ್ಲೈನ್ ಮೂಲಕ ನೀರು
(ಮೊದಲ ಪುಟದಿಂದ) ಹರಿಸುವುದು, ಒಳಚರಂಡಿ ವ್ಯವಸ್ಥೆ. ನೀರು ಹರಿಸಲು ಬೇಕಾಗುವ ನೆಲ ಟ್ಯಾಂಕ್. ಗದ್ದೆಯ ಬದಿಯಲ್ಲಿರುವ ನಾಲೆಯ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗೆ ನೀರು ಹರಿಸಲು ಬೇಕಾಗುವ ಕಾಮಗಾರಿ ನಡೆಸುವುದರೊಂದಿಗೆ. ಸುಮಾರು ಒಂದು ಸಾವಿರ ಏಕರೆ ಭತ್ತದ ಬೇಸಾಯಕ್ಕೆ ನೀರು ಸರಬರಾಜು ಮಾಡಲಾಯಿತು. ಆದರೆ ಕೃಷಿಕರ ಆ ದಿನದ ಕನಸು ಹೆಚ್ಚು ಕಾಲ ನನಸಾಗಿ ಉಳಿಯಲಿಲ್ಲ. ಕಳೆದ ಹಲವು ವರ್ಷಗಳಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದು ಕೃಷಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಯಂತ್ರೋಪಕರಣಗಳು ಕಾಣೆಯಾಗಿವೆ. ಕಟ್ಟಡ ಕಾಡುಪಾಲಾಗಿದೆ. ಪೈಪ್ಗಳು, ಚರಂಡಿಗಳು ಮಣ್ಣು ಪಾಲಾಗಿವೆ ಎನ್ನುತ್ತಾರೆ ಈ ಭಾಗದ ಕೃಷಿಕರು.
ಪ್ರತೀ ವರ್ಷ ಈ ಭಾಗದ ರೈತರು ಗದ್ದೆಯಲ್ಲಿ ನಾಟಿ ಮಾಡುತ್ತಿದ್ದಾರೆ. ಪ್ರತೀ ವರ್ಷ ಮುಂಗಾರು ಮಳೆ ಸರಿಯಾಗಿ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಭತ್ತದ ಕೃಷಿಕರಿಗೆ ನೀರಿನ ಸಮಸ್ಯೆ ಉಂಟಾಗಿರಲ್ಲಿಲ್ಲ. ಆದರೆ ಈ ಸಾಲಿನಲ್ಲಿ ಮುಂಗಾರು ಮಳೆಯು ಕಡಿಮೆ ಆಗಿರುವ ಪರಿಣಾಮ ಬೇಸಾಯಕ್ಕೆ ಅನುಕೂಲ ಕಲ್ಪಿಸುವ ಮತ್ತು ಈ ವ್ಯಾಪ್ತಿಯ ರೈತರ ಬೇಡಿಕೆಯ ಅನುಗುಣವಾಗಿ ಏತ ನೀರಾವರಿ ಕಾಮಗಾರಿ ಸಂಪೂರ್ಣ ಆಗಿದ್ದರೂ, ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷö್ಯದಿಂದ, ಬರದಿಂದ ರೈತರು ಮಾಡಿದ ನಾಟಿ ಎಲ್ಲಾ ಒಣಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿಂದೆ ಇಲ್ಲಿ ಏತನೀರಾವರಿ ಯೋಜನೆಗೆ ಇಲಾಖೆಯಿಂದ ಅಳವಡಿಸಿರುವ ನೀರು ಮೇಲೆತ್ತುವ ಯಂತ್ರಗಳು ಕೂಡ ಕಾಣೆಯಾಗಿರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಏತ ನೀರಾವರಿ ಘಟಕವನ್ನು ಮರು ಸ್ಥಾಪನೆಗೊಳಿಸಲು ಕ್ಷೇತ್ರದ ಶಾಸಕರಾದ ಮಂಥರ್ ಗೌಡ ಅವರಿಗೆ ಸ್ಥಳೀಯ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. -ಪಿ.ವಿ.ಪ್ರಭಾಕರ್