ಮಡಿಕೇರಿ, ಸೆ. ೬: ಈ ಹಿಂದಿನ ಬಿಜೆಪಿ ಸರ್ಕಾರದ ಅಧಿಕಾರದ ಕೊನೆಯ ದಿನಗಳಲ್ಲಿ ಘೋಷಣೆ ಗೊಂಡ ನೂತನ ವಿಶ್ವ ವಿದ್ಯಾನಿಲಯಗಳು ರಾಜ್ಯ ಸರ್ಕಾರದ ಅವಕೃಪೆಗೆ ಸಿಲುಕಿವೆ.

ಹೊಸ ವಿವಿಗಳನ್ನು ಘೋಷಿಸಿದ ಹಿಂದಿನ ಬಿಜೆಪಿ ಸರ್ಕಾರದಿಂದಲೂ ನೂತನ ವಿವಿ ಗಳಿಗೆ ಬಿಡಿಗಾಸು ಅನುದಾನ ಕೊಡಲಿಲ್ಲ.

ಈಗಿನ ಕಾಂಗ್ರೆಸ್ ಸರ್ಕಾರವೂ ಕೂಡ ಇದೂವರೆಗೆ ನಯಾಪೈಸೆ ಅನುದಾನ ನೀಡಿಲ್ಲ.

ಕುಲಪತಿಗಳಿಗೆ ವೇತನವೂ ಆಗಿಲ್ಲ ...?

ಸರ್ಕಾರ ಹೊಸದಾಗಿ ಘೋಷಿಸಿದ ರಾಜ್ಯದ ವಿವಿಧ ಏಳು ಹೊಸ ವಿವಿಗಳ ಕುಲಪತಿಗಳಿಗೆ ಇದೂವರೆಗೂ ವೇತನವನ್ನೇ ಬಿಡುಗಡೆ ಮಾಡಿಲ್ಲ ಎಂಬ ಆತಂಕಕಾರಿ ವಿಚಾರ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

ಹೊಸ ವಿವಿಗಳ ಸ್ಥಾಪನೆ ಗಳೊಂದಿಗೆ ಹೊಸ ಹೊಸ ಗುರಿಗಳು, ಹೊಸ ಹೊಸ ಆಲೋಚನೆ ಗಳೊಂದಿಗೆ ಹೊಸ ಹುರುಪಿನಿಂದ ಕೆಲಸ ಮಾಡುತ್ತಿರುವ ಕುಲಪತಿಗಳಿಗೆ ವೇತನವನ್ನೂ ನೀಡದೇ, ವಿವಿಗಳ ನಿರ್ವಹಣೆಗೆ ಯಾವುದೇ ರೀತಿಯ ಅನುದಾನ ಗಳನ್ನು ಕೂಡ ನೀಡದೆ ಇರುವ ಸರ್ಕಾರದ ನಿಲುವು ವಿವಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕುಲಪತಿಗಳಲ್ಲಿ ತೀವ್ರ ನಿರಾಸೆ ತರಿಸಿದೆ ಎಂದರೆ ಅಚ್ಚರಿಯೇನಿಲ್ಲ.

ಉನ್ನತ ಶಿಕ್ಷಣದಲ್ಲಿ ಹಿಂದುಳಿದಿರುವ ಕೊಡಗು

ದೇಶಕ್ಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವೀರಯೋಧರು ಹಾಗೂ ಅಪಾರ ಕ್ರೀಡಾ ಕಲಿಗಳನ್ನು ಸಮರ್ಪಣೆ ಮಾಡಿರುವ ಕೊಡಗು ಜಿಲ್ಲೆ.

ಕೊಡಗಿನ ವಿದ್ಯಾರ್ಥಿಗಳು ಮಂಗಳೂರು ವಿವಿ ಹಾಗೂ ಮೈಸೂರು ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ.೧೫ ಮಾತ್ರ ಎನ್ನಲಾಗುತ್ತಿದೆ.

ಅಂದರೆ, ನೆರೆಯ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಶೇ.೨೫ ರಿಂದ ೩೦ ರಷ್ಟಿದೆ. ಹಾಗೆಯೇ ನೆರೆ ರಾಜ್ಯ ತಮಿಳುನಾಡಿನಲ್ಲಿ ಇದು ಶೇ ೫೫ ರಿಂದ ೬೦ ರಷ್ಟಿದೆ. ಇನ್ನು ಶೈಕ್ಷಣಿಕವಾಗಿ ಅತ್ಯಂತ ಕಡಿಮೆ ರೇಷಿಯೋ ಚಾಮರಾಜ ನಗರ ಜಿಲ್ಲೆಯಾಗಿದೆ.

ಅಂದರೆ ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುವ ಹಂಬಲವುಳ್ಳ ಹೆಣ್ಣುಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ದೂರದ ನಗರಗಳಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿರುವುದು, ಹಾಗೆಯೇ ಕಡುಬಡತನದ ಬೇಗೆಯಲ್ಲಿ ಬೇಯುತ್ತಿರುವ ಇತರೇ ಬಡ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಪಂಗಡಗಳ, ಗುಡ್ಡಗಾಡು ಪ್ರದೇಶಗಳ ೧೮ ರಿಂದ ೨೩ ರ ವಯೋಮಿತಿಯ ಮಕ್ಕಳು ದೂರದ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳಲು ಸಾಧ್ಯವಾಗದ ಸ್ಥಿತಿ - ಗತಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಮನಗಂಡ ಸರ್ಕಾರ ಜಿಲ್ಲೆಗೊಂದು ವಿವಿ ಪರಿಕಲ್ಪನೆಯಂತೆ ಕೊಡಗು ಜಿಲ್ಲೆಗೂ ನೂತನ ವಿವಿಯನ್ನು ಘೋಷಿಸಿರುವುದು ಶೈಕ್ಷಣಿಕವಾಗಿ ಹಿಂದುಳಿದ ಭಾಗದ ಜನರಿಗೆ ಸಿಕ್ಕ ಬಹು ದೊಡ್ಡ ಭಾಗ್ಯ ಎಂದರೆ ಅತಿಶಯೋಕ್ತಿಯಲ್ಲ.

ಅನುದಾನವಿಲ್ಲದೆಯೂ ಅಭಿವೃದ್ದಿಗೆ ಮುಂದಾದ ವಿವಿಗಳು

ಹೊಸ ವಿವಿ ಘೋಷಣೆ ಮಾಡಿದ ಬಳಿಕ ಸರ್ಕಾರದಿಂದ ಇದುವರೆಗೂ ಯಾವುದೇ ಅನುದಾನಗಳು ಹರಿದು ಬರದಿದ್ದರೂ ಕೂಡ ತಮ್ಮದೇ ಆದ ಹೊಸ ಅಭಿವೃದ್ದಿಯ ಆಲೋಚನೆಗಳೊಂದಿಗೆ ಹೊಸದಾದ ಏಳು ವಿವಿಗಳ ಕುಲಪತಿಗಳು ತಮ್ಮ ಪರಿಧಿಗೆ ಬರುವ ಮಹಾವಿದ್ಯಾಲಯಗಳ ಸಂಯೋಜನೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ.

ಪದವಿ ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆ ಹಾಗೂ ಸ್ನಾತಕೋತ್ತರ ಶಿಕ್ಷಣದ ನೋಂದಣಿ ಪ್ರಕ್ರಿಯೆಗಳಿಗೂ ಚಾಲನೆ ನೀಡಲಾಗಿದೆ.

ಯೂನಿವರ್ಸಿಟಿ ಗ್ರಾಂಟ್ ಕಮಿಷನ್‌ನಿಂದ ೨ ಎಫ್ ಮಾನ್ಯತೆ ಕೂಡ ಪಡೆಯಲಾಗಿದೆ. ಹಾಗೂ ಸರ್ಕಾರಗಳಿಂದ ದೊರಕಬಹುದಾದ ವಿವಿಧ ರೀತಿಯ ಅನುದಾನಗಳಿಗಾಗಿ ೧೨ ‘ಬಿ’ ಪ್ರಕ್ರಿಯೆಗಳು ಕೂಡ ನಡೆದಿವೆ. ಕಳೆದ ಆಗಸ್ಟ್ ೧೮ ರಂದು ಮೂಲ ವಿಶ್ವವಿದ್ಯಾನಿಲಯಗಳಿಂದ ಹೊಸ ವಿವಿಗಳನ್ನು ಬೇರ್ಪಡಿಸುವ ಸಂಬAಧ ಸರ್ಕಾರ ಆದೇಶವನ್ನೂ ಕೂಡ ಹೊರಡಿಸಿದೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಸರ್ಕಾರ ಹೊಸ ವಿವಿಗಳನ್ನು ಮುಚ್ಚುವ ಬಗ್ಗೆ ಮಾತ ನಾಡುವುದು ಅಪಹಾಸ್ಯಕ್ಕೀಡಾದೀತು ಎಂಬ ಅಸಮಾಧಾನ ಕೇಳಿ ಬರುತ್ತಿದೆ.

ಹೊಸ ವಿವಿಗಳ ಬಗ್ಗೆ ಸರ್ಕಾರದ ತಾತ್ಸಾರ ಧೋರಣೆ

ಜಿಲ್ಲೆಗೊಂದು ‘ಯೂನಿವರ್ಸಿಟಿ’ ಎಂಬ ಆಕರ್ಷಕ ಘೋಷಣೆಯಡಿ ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಕೊಡಗು, ಹಾಸನ, ಬಾಗಲಕೋಟೆ, ಕೊಪ್ಪಳ, ಬೀದರ್, ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ತೆರೆದಿದ್ದ ಹೊಸ ವಿವಿಗಳು ಬಿಜೆಪಿಯ ವಿವೇಚನಾ ರಹಿತ ಹಾಗೂ ಸ್ವಹಿತಾಸಕ್ತಿಯ ಧೋರಣೆ ಎಂದು ಟೀಕಿಸಿರುವ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ಬದ ಕಾಂಗ್ರೆಸ್ ಸರ್ಕಾರ ಹೊಸ ವಿವಿಗಳನ್ನು ಮುಚ್ಚುವ ಚಿಂತನೆ ನಡೆಸುತ್ತಿದೆ ಎಂಬ ಆತಂಕಕಾರಿ ವಿಚಾರ ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿ ಬರುತ್ತಿರುವ ಬಗ್ಗೆ ಬಲ್ಲಮೂಲಗಳು ಸ್ಪಷ್ಟಪಡಿಸುತ್ತಿವೆ.

ಒಂದು ವೇಳೆ ಹೊಸ ಪರಿಕಲ್ಪನೆಯ ಈ ವಿವಿಗಳನ್ನು ಮುಚ್ಚುವತ್ತ ಸರ್ಕಾರ ಏನಾದರೂ ಮುಂದಾದಲ್ಲಿ ಕೊಡಗಿನ ಪ್ರಜ್ಞಾವಂತ ವೀರಯೋಧರು, ಕ್ರೀಡೆ ಹಾಗೂ ಶಿಕ್ಷಣ ಪ್ರೇಮಿಗಳು, ಸಾಹಿತಿಗಳು ರಾಜ್ಯ ಸರ್ಕಾರದ ವಿರುದ್ಧ ಬಹು ದೊಡ್ಡ ಸಮರವನ್ನೇ ಸಾರುವ ಮೂಲಕ ಕೊಡಗು ವಿವಿಯನ್ನು ಉಳಿಸುವ ಮಹಾ ಆಂದೋಲನಕ್ಕೆ ಮುಂದಾಗ ಬೇಕಿದೆ.