ಸಿದ್ದಾಪುರ, ಸೆ. ೬: ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದ ಒಂಟಿ ಸಲಗವನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸುಂಟಿಕೊಪ್ಪ ಬಳಿಯ ಕೆದಕಲ್ ಸಮೀಪದ ಕಾಫಿ ತೋಟದೊಳಗೆ ಬೀಡುಬಿಟ್ಟು ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಒಂಟಿ ಸಲಗವು ಕಳೆದ ಮೂರು ದಿನಗಳ ಹಿಂದೆ ಅರಣ್ಯ ಇಲಾಖೆಯಲ್ಲಿ ಆರ್.ಆರ್.ಟಿ. ಸಿಬ್ಬಂದಿಯಾಗಿದ್ದ ಗಿರೀಶ್ ಎಂಬಾತನ ಮೇಲೆ ಕಾರ್ಯಾಚರಣೆ ಸಂದರ್ಭ ದಾಳಿ ನಡೆಸಿ ದಂತದಿAದ ತಿವಿದು ಗಂಭೀರ ಗಾಯಗೊಳಿಸಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗಿರೀಶ್ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಪುಂಡಾನೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಕಳೆದೆರಡು ದಿನಗಳಿಂದ ಸುಂಟಿಕೊಪ್ಪ ವ್ಯಾಪ್ತಿಯ ಕೆದಕಲ್, ಮೋದೂರು, ಹೊರೂರು ಭಾಗದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಉಪಟಳ ನೀಡುತ್ತಿದ್ದ ಸಲಗದ ಚಲನವಲನ ಕಂಡುಹಿಡಿದರಾದರೂ, ಸಲಗವು ಕಾರ್ಯಾಚರಣೆ ತಂಡದ ದಿಕ್ಕುತಪ್ಪಿಸಿ ಓಡಾಡುತ್ತಿತ್ತು. ಆದರೆ ಛಲಬಿಡದ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರದಂದು ಸಾಕಾನೆಗಳಾದ ಪ್ರಶಾಂತ್, ವಿಕ್ರಮ್, ಅಜಯ, ಸುಗ್ರೀವಾ, ಹರ್ಷ, ಲಕ್ಷö್ಮಣ ಇವುಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಹೊರೂರು ಬಳಿಯ ಕಾಫಿ ತೋಟವೊಂದರ ಒಳಗೆ ಕಾಫಿ ಗಿಡಗಳ ಮಧ್ಯೆ

(ಮೊದಲ ಪುಟದಿಂದ) ಅವಿತುಕುಳಿತಿದ್ದ ಅಂದಾಜು ೧೮ ವರ್ಷ ಪ್ರಾಯದ ಸಲಗದ ಮೇಲೆ ಶೂಟರ್ ವಾಸಿಂ ಅಕ್ರಮ್ ಅರವಳಿಕೆ ಪ್ರಯೋಗಿಸಿದರು. ಔಷಧಿ ತಗುಲಿದ ತಕ್ಷಣ ಸಲಗವು ಸುಮಾರು ದೂರದವರೆಗೆ ಓಡಿ ನಂತರ ಹೊರೂರು ಗ್ರಾಮದ ಅಲತ್ಮಾಡು ಎಸ್ಟೇಟ್‌ನ ತೋಟದಲ್ಲಿ ನೆಲಕ್ಕೆ ಬಿತ್ತು. ಕೂಡಲೇ ಅರಣ್ಯ ಇಲಾಖಾಧಿಕಾರಿ, ಸಿಬ್ಬಂದಿ ಸೇರಿ ಸಾಕಾನೆಗಳ ನೆರವಿನಿಂದ ದೊಡ್ಡ ಗಾತ್ರದ ಹಗ್ಗವನ್ನು ಸೆರೆಯಾದ ಸಲಗದ ಕಾಲು ಮತ್ತು ಕೈಗೆ ಕಟ್ಟಿ ಮೇಲಕ್ಕೆತ್ತಿ ಎಳೆದು ತಂದರು. ಆದರೆ ಪುಂಡಾನೆಯು ದಾರಿ ಮಧ್ಯದಲ್ಲಿ ತೋಟದೊಳಗಿನಿಂದ ಬರಲು ಹಿಂದೇಟು ಹಾಕಿತಾದರೂ, ಸುಗ್ರೀವಾ ಮತ್ತು ಇತರ ಸಾಕಾನೆಗಳು ಸಲಗವನ್ನು ಎಳೆದು ತಂದವು. ನಂತರ ಕ್ರೇನ್ ಮೂಲಕ ಲಾರಿಗೆ ಹತ್ತಿಸ ಲಾಯಿತು. ಸೆರೆಹಿಡಿದ ಸಲಗವನ್ನು ಲಾರಿಯ ಮೂಲಕ ದುಬಾರೆಯ ಸಾಕಾನೆ ಶಿಬಿರಕ್ಕೆ ರವಾನಿಸಲಾಯಿತು.

ಸೆರೆಹಿಡಿದ ಸಲಗವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಸೆರೆಯಾದ ಸಲಗವು ಸುಂಟಿಕೊಪ್ಪ ಭಾಗದ ಕೆದಕಲ್ ಸುತ್ತಮುತ್ತ ಮಾನವನ ಮೇಲೆ ಹಾಗೂ ವಾಹನಗಳ ಮೇಲೆ ದಾಳಿ ನಡೆಸಿದ ಹಲವಾರು ಘಟನೆಗಳು ನಡೆದಿದ್ದವು. ಇತ್ತೀಚೆಗೆ ಆರ್.ಆರ್.ಟಿ. ತಂಡದ ಸಿಬ್ಬಂದಿ ಗಿರೀಶ್ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದ ಈ ಸಲಗವನ್ನು ಅರಣ್ಯ ಇಲಾಖಾಧಿಕಾರಿಗಳು, ಸಿಬ್ಬಂದಿ ಗುರುತಿಸಿ ಅದರ ಚಲನವಲನ ಕಂಡುಹಿಡಿದಿದ್ದರು. ಅದರಂತೆ ಬುಧವಾರ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿದೆ ಎಂದು ಮಡಿಕೇರಿ ವಿಭಾಗದ ಡಿ.ಎಫ್.ಓ. ಎ.ಟಿ. ಪೂವಯ್ಯ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಆನೆ ಕಾರ್ಯಪಡೆಯ ಮುಖ್ಯಸ್ಥರಾದ ಎ.ಟಿ. ಪೂವಯ್ಯ, ಎ.ಸಿ.ಎಫ್. ಎ.ಎ. ಗೋಪಾಲ್, ವಲಯ ಅರಣ್ಯಾಧಿಕಾರಿ ಚೇತನ್, ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್, ಕೂಡಕಂಡಿ ಸುಬ್ರಾಯ, ವಿಲಾಸ್ ಗೌಡ, ದೇವಯ್ಯ, ಅನಿಲ್ ಡಿಸೋಜ, ವನ್ಯಜೀವಿ ವೈದ್ಯಾಧಿಕಾರಿ ಡಾ|| ಚಿಟ್ಟಿಯಪ್ಪ ಸೇರಿದಂತೆ ೮೦ಕ್ಕೂ ಅಧಿಕ ಮಂದಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

-ವರದಿ: ವಾಸು ಎ.ಎನ್.