ಸುಂಟಿಕೊಪ್ಪ, ಸೆ. ೫: ಮುಂದಿನ ೨೦ ದಿನಗಳಲ್ಲಿ ಆನೆ ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ತಕ್ಷಣದ ದೀರ್ಘಕಾಲಿನ ಪರಿಹಾರ ವನ್ನು ಪಟ್ಟಿ ಮಾಡಿ ತಮಗೆ ಸಲ್ಲಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್‌ಗೌಡ ಅರಣ್ಯಾಧಿಕಾರಿ ಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾತ್ಕಾಲಿಕ ಮತ್ತು ದೀರ್ಘಕಾಲದ ಪರಿಹಾರ ಕುರಿತು ಕ್ರೋಢೀಕರಿಸಲಾದ ಅಂಶಗಳನ್ನು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರ ಗಮನಕ್ಕೆ ತರಲಾಗುವುದೆಂದು ಹೇಳಿದರು. ಜೊತೆಗೆ ಪೊನ್ನತ್ ಮೊಟ್ಟೆಯಿಂದ ಹೊರೂರುವರೆಗಿನ ೯ ಕಿ.ಮೀ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೆಡ್ ನಿರ್ಮಾಣ ಮಾಡಬೇಕಾಗಿದ್ದು ಅದು ಕಾರ್ಯಗತಗೊಳ್ಳುವವರೆಗೆ ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಲ್ಪಡುವ ಸೋಲಾರ್ ಬೇಲಿಯನ್ನು ಅಳವಡಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಕಾಫಿ ಬೆಳೆಗಾರರು, ಕಾರ್ಮಿಕರು ಮತ್ತು ಸಾರ್ವಜನಿಕರು ಕಾಡಾನೆ ಹಾವಳಿ ಹಿನ್ನಲೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಇತರರೆಲ್ಲರೂ ಜೀವಭಯ ದಲ್ಲಿ ದಿನ ಕಳೆಯುತ್ತಿರುವುದರ ಬಗ್ಗೆ ಶಾಸಕರ ಗಮನಕ್ಕೆ ತಂದರು. ೨೦೨೦ ರಿಂದ ಆನೆ ಹಾವಳಿಯಿಂದ ಕೃಷಿ ಫಸಲು ನಾಶದ ಬಗ್ಗೆ ಅರಣ್ಯ ಇಲಾಖೆಗೆ ಸುಮಾರು ೨೪ ಬಾರಿ ಪತ್ರ ನೀಡಿದರೂ ಯಾವುದೇ ಸ್ಪಂದನ ಇಲ್ಲದಿರುವ ಬಗ್ಗೆ ಯುವ ಬೆಳೆಗಾರರೊಬ್ಬರು ಅಳಲನ್ನು ತೋಡಿಕೊಂಡರು. ಅವರ ಅರ್ಜಿಯ ಕುರಿತು ತಕ್ಷಣ ಸ್ಪಂದಿಸುವAತೆ ಡಿಸಿಎಫ್ ಪೂವಯ್ಯ ಅವರಿಗೆ ಶಾಸಕರು ಸೂಚನೆ ನೀಡಿದರು.

ಅರಣ್ಯ ಇಲಾಖೆಯವರು ಬೆಳಿಗ್ಗೆ ಮತ್ತು ಶಾಲಾ ಮಕ್ಕಳು ಬರುವ ಸಂದರ್ಭ ಆನೆಗಳ ಚಲನವಲನದ ಬಗ್ಗೆ ನಿಗಾವಹಿಸಬೇಕೆಂದು ಕೋರಿದರು. ಈ ಕುರಿತು ಡಿಸಿಎಫ್ ಅವರಿಗೆ ಸೂಚನೆ ನೀಡಿದ ಶಾಸಕರು ಬೆಳಿಗ್ಗೆ ೬ ರಿಂದ ರಾತ್ರಿ ೯ ರವರೆಗೆ ಆರ್‌ಆರ್‌ಟಿ ತಂಡ (ಕ್ಷಿಪ್ರ ಕಾರ್ಯಾ ಚರಣೆ) ಸದಾ ಸನ್ನದ್ದವಾಗಿರುವಂತೆ ಸೂಚಿಸಿದರಲ್ಲದೆ ಆ್ಯಂಬ್ಯುಲೆನ್ಸ್ ಒಂದನ್ನು ಇಟ್ಟುಕೊಳ್ಳುವಂತೆ ಸಲಹೆಯಿತ್ತರು.

ಸಭೆಯಲ್ಲಿ ಮಡಿಕೇರಿ ವಿಭಾಗದ ಉಪ ಅರಣ್ಯಸಂಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್, ಪ್ರಬಾರ ಆರ್‌ಎಫ್.ಓ ಚೇತನ್. ಡಿಆರ್‌ಎಫ್‌ಗಳಾದ ರಂಜನ್ ಮತ್ತು ದೇವಯ್ಯ, ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ, ಉಪಾಧ್ಯಕ್ಷೆ ಪಾರ್ವತಿ ಸೋಮಯ್ಯ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ, ಪಿಡಿಓ ರಾಜಶೇಖರ್, ಗ್ರಾಮ ಪಂಚಾಯಿತಿ ಸದಸ್ಯರು, ಕೆದಕಲ್, ಹೊರೂರು, ಹಾಲೇರಿ ವ್ಯಾಪ್ತಿಯ ವಿವಿಧ ಕಾಫಿ ತೋಟಗಳ ಮಾಲೀಕರು ಉಪಸ್ಥಿತರಿದ್ದು ಕಾಡಾನೆಗಳ ಹಾವಳಿಯ ಬಗ್ಗೆ ಮಾಹಿತಿ ನೀಡಿದರು.