ಸುಂಟಿಕೊಪ್ಪ, ಸೆ. ೪: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರಿಬ್ಬರ ಮೇಲು ಸಲಗ ದಾಳಿಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆದಕಲ್ ಬಳಿ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ೯ ಗಂಟೆಗೆ ಸುಂಟಿಕೊಪ್ಪದ ೧ನೇ ವಿಭಾಗ ನಿವಾಸಿ ಮುರುಗೇಶ್ ಮತ್ತು ಜಗದೀಶ್ ಎಂಬುವರು ದ್ವಿಚಕ್ರ ವಾಹನದಲ್ಲಿ ಕೆದಕಲ್ ಸಮೀಪದ ಗ್ರೀನ್ ಡಾಲ್ ತೋಟಕ್ಕೆ ಕೆಲಸಕ್ಕೆ ಡಿ ಬ್ಲಾಕ್ ರಸ್ತೆಯಲ್ಲಿ ಹೋಗುವ ಸಮಯದಲ್ಲಿ ದಿಢೀರನೆ ತೋಟದೊಳಗಿನಿಂದ ರಸ್ತೆಗೆ ಅಡ್ಡಲಾಗಿ ಆನೆ ಬಂದಿದೆ. ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸವಾರರು ಆನೆಯನ್ನು ಕಂಡು ಭಯಭೀತರಾಗಿ ಓಡುವ ಯತ್ನದಲ್ಲಿರುವಾಗ ಸವಾರ ಮುರುಗೇಶ್‌ನ ಮೇಲೆ ದಾಳಿ ನಡೆಸಿದೆ. ಇದರಿಂದ ಮುರುಗೇಶ್‌ಗೆ ಕಾಲು ಹಾಗೂ ಕೈಗಳಿಗೆ ಗಾಯವಾಗಿದೆ. ಇದರಿಂದ ಕುಪಿತಗೊಂಡ ಕಾಡಾನೆ, ದ್ವಿಚಕ್ರ ವಾಹನವನ್ನು ಹಾನಿಪಡಿಸಿದೆ. ಜಗದಿ ಎಂಬಾತನು ಓಡಿ ಹೋಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ತೋಟದ ರೈಟರ್ ಬೊಬ್ಬೆ ಹಾಕಿದ್ದರಿಂದ ಮುರುಗೇಶ್ ಪ್ರಾಣ ಉಳಿದಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿ, ಸಿಬ್ಬಂದಿ ವರ್ಗ ಭೇಟಿ ನೀಡಿ ಗಾಯಾಳು ಮುರುಗೇಶ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅರಣ್ಯ ಇಲಾಖೆ ಒಂಟಿ ಸಲಗವನ್ನು ಓಡಿಸುವ ಸಂದರ್ಭ ಮತ್ತೆ ಇದೇ ದಾರಿಯಲ್ಲಿ ಮಧ್ಯಾಹ್ನ ೧೨ ಗಂಟೆಗೆ ದ್ವಿಚಕ್ರ ಸ್ಕೂಟಿಯಲ್ಲಿ ಬರುತ್ತಿದ್ದ ಧರಣೇಶ್ ಎಂಬವನಿಗೆ ದಾಳಿ ನಡೆಸಲು ಮುಂದಾದ ಸಲಗ ಈತನ ಸ್ಕೂಟಿಯನ್ನು ತಿವಿದು ಹಾನಿಗೆಡವಿದೆ.

ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಒಂಟಿ ಸಲಗ ಸುತ್ತಾಡುತ್ತಿದ್ದು, ಈ ರಸ್ತೆಯಲ್ಲಿ ಓಡಾಡುವ ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು, ವಾಹನ ಸವಾರರು ಜೀವ ಭಯದಿಂದ ಓಡಾಡುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.