ಬೆAಗಳೂರು, ಸೆ. ೪: ಆಗಸ್ಟ್ ೨೩ ರಂದೇ ಚಂದ್ರನೆಲದಲ್ಲಿ ಲ್ಯಾಂಡ್ ಆದ ವಿಕ್ರಂ, ಚಂದ್ರ ಪದರದಲ್ಲಿ ಜಿಗಿದು ಮತ್ತೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇಸ್ರೋ ಬೆಂಗಳೂರು ಕೇಂದ್ರದಿAದ ವಿಕ್ರಂಗೆ ನಿಯಂತ್ರಿತವಾಗಿ ಚಂದ್ರಪದರದಲ್ಲಿ ಈ ಕಾರ್ಯ ಮಾಡಲು ಆದೇಶ ನೀಡಿದ ಬಳಿಕ ವಿಕ್ರಂ ತನ್ನ ೩ ಇಂಜಿನ್ಗಳನ್ನು ಚಲಾಯಿಸಿ ಸುಮಾರು ೪೦ ಸೆಂಟಿಮೀಟರ್ ಮೇಲಕ್ಕೆ ಜಿಗಿದಿದೆ. ಇದಾದ ಬಳಿಕ ಈ ಹಿಂದೆ ನೆಲೆ ನಿಂತಿದ್ದ ಸ್ಥಳದಿಂದ ೩೦ ರಿಂದ ೪೦ ಸೆಂಟಿಮೀಟರ್ ಆಚೆಗೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ಮೂಲಕ ನಿಗಧಿತ ಯೋಜನೆಯ ಕಾರ್ಯಗಳನ್ನೂ ಮೀರಿ ಸಾಧನೆ ಮಾಡಿದೆ.
ಭವಿಷ್ಯದ ಯೋಜನೆಗಳಿಗೆ ಸಹಕಾರಿ: ಭವಿಷ್ಯದಲ್ಲಿ ಚಂದ್ರನ ಮಣ್ಣಿನ ಮಾದರಿಯನ್ನು ಭೂಮಿಗೆ ತರುವುದು ಸೇರಿದಂತೆ ಗಗನಯಾತ್ರಿಕರನ್ನೂ ಅಲ್ಲಿಗೆ ಕಳುಹಿಸಿ ಸುರಕ್ಷಿತವಾಗಿ ವಾಪಸ್ ಕರೆತರುವ ಯೋಜನೆಯ ಸಾಮರ್ಥ್ಯದ ಪರೀಕ್ಷೆಯನ್ನು ಈ ಒಂದು ಪ್ರಯೋಗದ ಮೂಲಕ ನಡೆಸಲಾಗಿರುವುದಾಗಿ ಇಸ್ರೋ ಮಾಹಿತಿ ನೀಡಿದೆ.
ಇದೀಗ ವಿಕ್ರಂ, ಪ್ರಗ್ಯಾನ್ ನಿದ್ರೆಯಲ್ಲಿ: ಎಲ್ಲಾ ನಿಶ್ಚಿತ ಯೋಜನೆಗಳನ್ನು ಪೂರೈಸಿರುವ ಪ್ರಗ್ಯಾನ್ ರೋವರ್ ತಾ.೩ ರಂದು ನಿದ್ದೆಗೆ ಜಾರಿದೆ. ಪೂರ್ವ ನಿಗದಿಯಂತೆ ೧೪ ದಿನಗಳ ಬಳಿಕ, ಅಂದರೆ ತಾ.೭ರ ತನಕವೂ ಪ್ರಗ್ಯಾನ್ಗೆ ಕಾರ್ಯಾಚರಿಸುವ ಸಾಮರ್ಥ್ಯವಿತ್ತಾದರೂ ತಾ.೩ ರಂದೇ ತನ್ನೆಲ್ಲಾ ತಾಂತ್ರಿಕ ಪರಿಕರಗಳನ್ನು ‘ಸ್ಲೀಪ್ ಮೋಡ್’ಗೆ ಹಾಕಿದೆ. ನಿಶ್ಚಿತ ವೈಜ್ಞಾನಿಕ ಪ್ರಯೋಗಗಳನ್ನೆಲ್ಲಾ ಪೂರೈಸಿರುವ ಕಾರಣ ಕಾರ್ಯಚಟುವಟಿಕೆಯನ್ನು ನಿಲ್ಲಿಸಿದೆ. ವಿಕ್ರಂ ಲ್ಯಾಂಡರ್ ಕೂಡ ತಾ.೪ ರಂದು ಬೆಳಿಗ್ಗೆ ೨ನೇ ಬಾರಿ ಲ್ಯಾಂಡ್ ಆದ ಬಳಿಕ ‘ಸ್ಲೀಪ್ ಮೋಡ್’ಗೆ ಜಾರಿದೆ. ತಾ.೭ರ ಬಳಿಕ ಪ್ರಗ್ಯಾನ್ ಹಾಗೂ ವಿಕ್ರಂ ಇರುವ ಸ್ಥಳದಲ್ಲಿ ರಾತ್ರಿಯಾಗಲಿದ್ದು, ತಾ.೨೨ ರಂದು ಸೂರ್ಯನ ಬೆಳಕು ಮತ್ತೆ ಆ ಜಾಗಕ್ಕೆ ಬೀಳುವ ನಿರೀಕ್ಷೆಯಿದೆ. ಇಷ್ಟರವರೆಗೆ ಚಂದ್ರನ ತೀವ್ರ ಕ್ಲಿಷ್ಟಕರ ಚಳಿಯಲ್ಲಿ ವಿಕ್ರಂ, ಪ್ರಗ್ಯಾನ್ಗೆ ಹಾನಿಯಾಗದಿದ್ದಲ್ಲಿ ತಾ.೨೨ ರಂದು ಇವೆರಡು ಎದ್ದು ಪುನಃ ೧೪ ದಿನಗಳ ಕಾಲ ಕಾರ್ಯಾಚರಿಸಲಿವೆ.
ಭೂ-ಕಕ್ಷೆಯಲ್ಲಿ ಆದಿತ್ಯ ಎಲ್-೧: ಈ ಮಧ್ಯೆಯಲ್ಲಿ ತಾ.೨ ರಂದು ಸೂರ್ಯನನ್ನು ಅಧ್ಯಯನ ನಡೆಸಲು ಉದ್ದೇಶಿಸಿ ಉಡಾವಣೆಗೊಂಡ ಇಸ್ರೋದ ಮತ್ತೊಂದು ಯೋಜನೆಯಾಗಿರುವ ಆದಿತ್ಯ ಎಲ್-೧ ನೌಕೆಯು ಭೂಮಿಯ ಸುತ್ತ ನಿಗಧಿತ ಕಕ್ಷೆಯಲ್ಲಿ ೨೪೫ ಕಿ.ಮೀ(ಕನಿಷ್ಟ), ೨೨,೪೫೯ ಕಿ.ಮೀ(ಗರಿಷ್ಠ) ಚಲಿಸುತ್ತಿದೆ.