ಮಡಿಕೇರಿ, ಸೆ. ೨: ವೀರಾಜಪೇಟೆ ಪ್ರಾದೇಶಿಕ ಅರಣ್ಯ ವಿಭಾಗ ವ್ಯಾಪ್ತಿಗೆ ಒಳಪಡುವಂತೆ ಅರಣ್ಯದಂಚಿನಲ್ಲಿ ಬರುವಂತಹ ಹಿಡುವಳಿ ಜಮೀನುಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ವನ್ಯಪ್ರಾಣಿಗಳಿಂದ ರಕ್ಷಿಸಲು ಕರ್ನಾಟಕ ಅರಣ್ಯ ಇಲಾಖೆ ಸಹಾಯಧನ ಸೌಲಭ್ಯದೊಂದಿಗೆ ಸೌರಶಕ್ತಿ ಬೇಲಿ ನಿರ್ಮಿಸಲು ಯೋಜನೆ ರೂಪಿಸಿದೆ.

ಇದರಂತೆ ಅರಣ್ಯ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ನಿರ್ದಿಷ್ಟ ತಾಂತ್ರಿಕ ಅಂಶಗಳ ಅನ್ವಯ ತಗುಲಬಹುದಾದ ವೆಚ್ಚವನ್ನು ಗಣನೆಗೆ ತೆಗೆದುಕೊಂಡು ಒಂದು ಕಿ.ಮೀ. ಸೌರಶಕ್ತಿ ಬೇಲಿ ಅಳವಡಿಸಲು ರೂ. ೨.೩೦ ಲಕ್ಷ ನಿಗದಿಪಡಿಸಲಾಗಿದೆ. ಇದರಲ್ಲಿ ರೈತರಿಗೆ ಶೇ. ೫೦ ರಷ್ಟು ಸಹಾಯಧನವನ್ನು ನಿಗದಿಪಡಿಸಲಾಗಿದ್ದು, ರೈತರು ಇದರ ಸೌಲಭ್ಯ ಪಡೆಬಹುದಾಗಿದೆ.

ಸೌರಶಕ್ತಿ ಬೇಲಿ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ರೈತರು ಅರಣ್ಯ ಇಲಾಖೆಯ ಸಂಬAಧಪಟ್ಟ ವಲಯ ಅರಣ್ಯ ಅಧಿಕಾರಿಗಳಿಗೆ ಸಲ್ಲಿಸಬೇಕಿದೆ. ಬೇಲಿ ನಿರ್ಮಾಣ ಕಾರ್ಯವನ್ನು ಅಧಿಕೃತಗೊಳಿಸಲಾಗಿರುವ ನಿರ್ಮಾಣದಾರರ ಮೂಲಕ ನಿರ್ವಹಿಸಬೇಕಿದ್ದು, ಸರಕಾರದ ಮಾರ್ಗಸೂಚಿ ಹಾಗೂ ಇತರ ಷರತ್ತುಗಳ ಅನುಸಾರ ಸಹಾಯಧನ ಕಲ್ಪಿಸಲಾಗುವುದು. ಈ ಬಗ್ಗೆ ಹೆಚ್ಚಿನ ವಿವರಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವೀರಾಜಪೇಟೆ ವಿಭಾಗ ಹಾಗೂ ಪರಿಮಿತಿ ವ್ಯಾಪ್ತಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಥವಾ ವಲಯ ಅರಣ್ಯ ಅಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಬಹುದಾಗಿ ಡಿಸಿಎಫ್ ಶರಣ ಬಸಪ್ಪ ತಿಳಿಸಿದ್ದಾರೆ.