ವೀರಾಜಪೇಟೆ, ಸೆ. ೨: ಪೊಲೀಸ್ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ಹೊಸದಾಗಿ ನೇಮಕ ಮಾಡುವ ಅಭ್ಯರ್ಥಿಗಳನ್ನು ಆಯಾಯ ಜಿಲ್ಲಾವಾರು ಭರ್ತಿ ಮಾಡುವಂತೆ ಹಾತೂರು ಗ್ರಾಮದ ನಿವೃತ್ತ ಪೋಲಿಸ್ ಅಧಿಕಾರಿ ಚೋಣಮಾಡ ಸಿ. ಕಾವೇರಪ್ಪ ಅವರು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ಕಳೆದ ಮೂವತ್ತು ವರ್ಷಗಳ ಹಿಂದೆ ಪೊಲೀಸ್ ಹಾಗೂ ಇತರ ಇಲಾಖೆಗಳಿಗೆ ಸೇರುವ ಅಭ್ಯರ್ಥಿಗಳನ್ನು ಜಿಲ್ಲಾವಾರು ನೇಮಕ ಮಾಡುವ ಕ್ರಮ ಇತ್ತು. ಇದರಿಂದ ಜಿಲ್ಲಾವಾರು ಬಡ ರೈತರ ಮಕ್ಕಳಿಗೆ ಇಲಾಖೆಗಳಲ್ಲಿ ಕೆಲಸ ಸಿಗುತ್ತಿತ್ತು. ಆದರೆ ಇದೀಗ ರಾಜ್ಯವಾರು ಆಯ್ಕೆ ಪ್ರಕ್ರಿಯೆ ನಡೆಯುವುದರಿಂದ ಜಿಲ್ಲೆಯ ಬಡ ಅಭ್ಯರ್ಥಿಗಳು ಕೆಲಸ ಗಿಟ್ಟಿಸುವುದರಲ್ಲಿ ವಂಚಿತರಾಗುತ್ತಿದ್ದಾರೆ. ಜಿಲ್ಲೆಯ ಪೊಲೀಸ್ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಹೊರ ಜಿಲ್ಲೆಯವರೇ ಇರುವುದರಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಮನವಿ ಸ್ವೀಕರಿಸಿದ ಶಾಸಕರು, ರಾಜ್ಯ ಸರ್ಕಾರದ ಆದೇಶವಾಗಿರುವದರಿಂದ ಇದನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮುಂದಿನ ಕ್ರಮ ತೆಗದುಕೊಳ್ಳುವÀ ಭರವಸೆ ನೀಡಿದರು. ಮನವಿ ನೀಡುವ ಸಂದರ್ಭ ಹಾತೂರು ಗ್ರಾಮ ಪಂಚಾಯಿತಿ ಸದಸ್ಯ ಕೊಕ್ಕಂಡ ಗಿಣಿ ಗಣಪತಿ, ಸಮಾಜ ಸೇವಕ ಪುಲಿಯಂಡ ರೋಷನ್ ಹಾಜರಿದ್ದರು.