(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಸೆ. ೨: ರಾಜ್ಯದ ಕ್ರೀಡಾ ತವರೂರು ಕೊಡಗು ಕ್ರೀಡೆಯಲ್ಲಿ ಸದಾ ಸುದ್ದಿಯಲ್ಲಿರುವ ಜಿಲ್ಲೆ. ಅಪ್ರತಿಮ ಕ್ರೀಡಾಪಟುಗಳನ್ನು ಪುಟ್ಟ ಜಿಲ್ಲೆ ಕೊಡಗು ಅಂತರ ರಾಷ್ಟಿçÃಯ ಮಟ್ಟಕ್ಕೆ ಪರಿಚಯಿಸಿದೆ.

ಬಾಲ್ಯದಿಂದಲೇ ಕ್ರೀಡೆಯಲ್ಲಿ ಸೂಕ್ತ ತರಬೇತಿ, ಶಾಲಾ ಮಟ್ಟದಿಂದಲೇ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ದೊರೆತರೆ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ವಹಿಸಿಕೊಂಡರೆ ಮಾತ್ರ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ಸಾಧ್ಯ. ಆದರೆ ಮಕ್ಕಳಿಗೆ ಆಟದ ಪಾಠ ಹೇಳಿಕೊಡಲು ದೈಹಿಕ ಶಿಕ್ಷಕರೇ ಇಲ್ಲದಂತಾಗಿದೆ. ಹೌದು ಕ್ರೀಡಾ ತವರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕ್ರೀಡೆಯ ಬಗ್ಗೆ ತರಬೇತಿ ನೀಡಲು ದೈಹಿಕ ಶಿಕ್ಷಕರಿಲ್ಲದೆ ಕ್ರೀಡೆಯಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ೮೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಒಟ್ಟು ೫೮ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆ ಖಾಲಿ ಇದೆ. ಪ್ರಸಕ್ತ ಶೈಕ್ಷಣಿಕ ವರ್ಷ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಡಗಿನ ೧೦ ದೈಹಿಕ ಶಿಕ್ಷಕರು ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದಾರೆ. ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದೆ, ಸಹಶಿಕ್ಷಕರೇ ಒತ್ತಡದಲ್ಲಿ ದೈಹಿಕ ಶಿಕ್ಷಕರ ಕೆಲಸ ನಿರ್ವ ಹಿಸುತ್ತಿದ್ದಾರೆ. ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಕ್ರೀಡೆಯ ಬಗ್ಗೆ ಪಾಠ ಹೇಳಲು ದೈಹಿಕ ಶಿಕ್ಷಕರಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಾಲ್ಯದಿಂದಲೇ ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ.

ಕ್ರೀಡಾಕೂಟದಲ್ಲಿ ಭಾಗವಹಿಸಲು ಸಿಗುತ್ತಿಲ್ಲ ಸೂಕ್ತ ತರಬೇತಿ

ಪ್ರಾಥಮಿಕ ಶಾಲಾ ಮಟ್ಟ ದಿಂದಲೇ ವಿದ್ಯಾರ್ಥಿಗಳಲ್ಲಿ ಅಡಕ ವಾಗಿರುವ ಕ್ರೀಡಾ ಆಸಕ್ತಿ, ಪ್ರತಿಭೆ ಯನ್ನು ಗುರುತಿಸಿ ಸೂಕ್ತ ತರಬೇತಿ ನೀಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ಸಾಧ್ಯ. ಪ್ರತಿ ಗ್ರಾಮದಲ್ಲಿ ಒಬ್ಬ ಒಲಂಪಿಯನ್ ಇರುತ್ತಾನೆ ಎಂಬ ಮಾತಿದೆ. ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದೆ ಕೊಡಗಿನ ಗ್ರಾಮೀಣ ಭಾಗದ ಎಲೆಮರೆ ಕಾಯಿ ಯಂತಿರುವ ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗವಹಿಸಲು ಸೂಕ್ತ ತರಬೇತಿ ಸಿಗದೆ, ಕ್ರೀಡಾಕೂಟ ಗಳಿಂದ ದೂರ ಉಳಿದಿದ್ದಾರೆ. ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಿAದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಲಯ

(ಮೊದಲ ಪುಟದಿಂದ) ಮಟ್ಟದಿಂದ ರಾಜ್ಯಮಟ್ಟದವರೆಗಿನ ಕ್ರೀಡಾಕೂಟಗಳು ನಡೆಯುತ್ತಿರುತ್ತವೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಒಂದು ತಿಂಗಳ ಮುಂಚಿತವಾಗಿ ಸಜ್ಜುಗೊಳಿಸಲಾಗುತ್ತದೆ. ಆದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದಾರೆ. ದೈಹಿಕ ಶಿಕ್ಷಕರಿಲ್ಲದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡದೆ ನಾಮಕಾವಸ್ಥೆಗೆ ಕ್ರೀಡಾಕೂಟಗಳಲ್ಲಿ ಸಹಶಿಕ್ಷಕರು ವಿದ್ಯಾರ್ಥಿಗಳನ್ನು ಭಾಗವಹಿಸಲು ಸಜ್ಜು ಮಾಡುತ್ತಿದ್ದಾರೆ.

ಸಹಶಿಕ್ಷಕರೇ ದೈಹಿಕ ಶಿಕ್ಷಕರು

ಕೊಡಗು ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿಯಿರುವ ದೈಹಿಕ ಶಿಕ್ಷಕರ ಕೆಲಸವನ್ನು ಶಾಲೆಯ ಸಹಶಿಕ್ಷಕರೇ ನಿಭಾಯಿಸುತ್ತಿದ್ದಾರೆ. ೬ ರಿಂದ ೮ ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಪಠ್ಯ ಅಳವಡಿಸಲಾಗಿದೆ. ಸರ್ಕಾರ ಸಹಶಿಕ್ಷಕರಿಗೆ ಎರಡು ವಾರಗಳ ಕಾಲ ದೈಹಿಕ ಶಿಕ್ಷಣದ ಬಗ್ಗೆ ತರಬೇತಿ ನೀಡಿ ನೀವೇ ದೈಹಿಕ ಶಿಕ್ಷಣದ ಪಾಠ ಮಾಡಿ ಎಂದು ಸಹಶಿಕ್ಷಕರಿಗೆ ದೈಹಿಕ ಶಿಕ್ಷಣದ ಕೆಲಸವನ್ನು ನೀಡಿದೆ.

ದಶಕ ಕಳೆದರೂ ಹೊಸ ನೇಮಕಾತಿ ಇಲ್ಲ

ರಾಜ್ಯದಲ್ಲಿ ಹೊಸ ದೈಹಿಕ ಶಿಕ್ಷಕರ ಹೊಸ ನೇಮಕಾತಿ ನಡೆದು ದಶಕ ಕಳೆದಿದೆ. ೨೦೦೭ ರಿಂದ ಇದುವರೆಗೆ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಹೊಸ ನೇಮಕಾತಿ ನಡೆದಿಲ್ಲ. ಅದೇ ರೀತಿಯಲ್ಲಿ ೨೦೧೫ ರಿಂದೀಚೆಗೆ ಪ್ರೌಢಶಾಲೆಗಳಲ್ಲಿ ಹೊಸ ದೈಹಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯದೆ ದೈಹಿಕ ಶಿಕ್ಷಕ ಶಿಕ್ಷಣ ಹಾಗೂ ತರಬೇತಿ ಪಡೆದ ಶಿಕ್ಷಕರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ.

ಈ ಹಿಂದೆ ಬಿ.ಪೆಡ್ ಶಿಕ್ಷಣವನ್ನು ಪಡೆದು ದೈಹಿಕ ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ರಾಜ್ಯದಲ್ಲಿ ಸಿ.ಪೆಡ್ ತರಬೇತಿ ಕೇಂದ್ರಗಳು ಇದ್ದವು. ಆದರೆ ಇದೀಗ ರಾಜ್ಯದಲ್ಲಿ ಸಿ.ಪೆಡ್ ತರಬೇತಿ ಕೇಂದ್ರಗಳನ್ನೇ ಬಂದ್ ಮಾಡಲಾಗಿದೆ.

೧೨೦ ವಿದ್ಯಾರ್ಥಿಗಳು ಇದ್ದರೆ ಮಾತ್ರ ದೈಹಿಕ ಶಿಕ್ಷಕರು

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ೧೨೦ ವಿದ್ಯಾರ್ಥಿಗಳು ಇದ್ದರೆ ಮಾತ್ರ ದೈಹಿಕ ಶಿಕ್ಷಕರನ್ನು ನೇಮಿಸುತ್ತಾರೆ. ಇಲ್ಲದಿದ್ದಲ್ಲಿ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಸಹಶಿಕ್ಷಕರೇ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಬೇಕಾಗಿದೆ ಹಾಗೂ ಕೆಲವೊಂದು ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ. ದೈಹಿಕ ಶಿಕ್ಷಣದೊಂದಿಗೆ ದೈಹಿಕ ಶಿಕ್ಷಕರು ಇತರೆ ವಿಷಯಗಳನ್ನು ಪಾಠ ಮಾಡಬೇಕಾಗಿದೆ. ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸರ್ಕಾರ ವಿಶೇಷ ವಿನಾಯಿತಿ ನೀಡಿದೆ. ಒಂದು ಶಾಲೆಯಲ್ಲಿ ಕನಿಷ್ಟ ೮೦ ವಿದ್ಯಾರ್ಥಿಗಳಿದ್ದರೆ ಆ ಶಾಲೆಗೆ ಒಬ್ಬ ದೈಹಿಕ ಶಿಕ್ಷಕರನ್ನು ನೇಮಕ ಮಾಡುತ್ತಾರೆ. ವಿದ್ಯಾರ್ಥಿಗಳು ಕಡಿಮೆಯಾದರೆ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗೆ ವರ್ಗಾವಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ದೈಹಿಕ ಶಿಕ್ಷಕರು ಎಂದು ಪರಿಗಣನೆ ಮಾಡಿದರೆ ಕನಿಷ್ಟ ಒಂದು ಶಾಲೆಯಲ್ಲಿ ೮೦ ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಬೇಕು.

ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ೮೦ ಕ್ಕಿಂತ ಮೇಲೆ ವಿದ್ಯಾರ್ಥಿಗಳಿರುವ ಶಾಲೆಗಳು ಬೆರಳಣಿಕೆಯಷ್ಟು ಮಾತ್ರ ಇದೆ.ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸರ್ಕಾರ ದೈಹಿಕ ಶಿಕ್ಷಕರ ಹೊಸ ನೇಮಕಾತಿ ಮಾಡುತ್ತಿಲ್ಲ.

ಡಾ. ವೈದ್ಯನಾಥನ್ ವರದಿ ಜಾರಿಗೊಳಿಸಲಿ

ಡಾ. ವೈದ್ಯನಾಥನ್ ವರದಿ ಪ್ರಕಾರ ಒಂದು ಶಾಲೆಯಲ್ಲಿ ಒಬ್ಬ ದೈಹಿಕ ಶಿಕ್ಷಕ ಕಡ್ಡಾಯ ಎಂದು ೨೦೨೧ ರಲ್ಲಿ ಗೆಜೆಟ್ ಪಾಸ್ ಮಾಡಲಾಗಿತ್ತು. ಡಾ. ವೈದ್ಯನಾಥನ್ ವರದಿ ಜಾರಿಗೆ ತರುವಂತೆ ೨೦೨೧ರಲ್ಲಿ ರಾಜ್ಯದ ದೈಹಿಕ ಶಿಕ್ಷಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು ಕೂಡ ಇದುವರೆಗೆ ಯಾವುದೇ ಹೊಸ ದೈಹಿಕ ಶಿಕ್ಷಕರ ನೇಮಕಾತಿ ನಡೆದಿಲ್ಲ. ದೈಹಿಕ ಶಿಕ್ಷಕರ ಹುದ್ದೆಗೆ ವಿದ್ಯಾರ್ಥಿಗಳ ಮಿತಿ ನೋಡದೆ, ಡಾ. ವೈದ್ಯನಾಥನ್ ವರದಿ ಜಾರಿಗೊಳಿಸಿ, ಸರ್ಕಾರ ರಾಜ್ಯದ ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ೭, ಅನುದಾನಿತ ಪ್ರೌಢ ಶಾಲೆಗಳಲ್ಲಿ ೩, ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ೦೩ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ೧೩ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ.ಮಡಿಕೇರಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೮, ಸರ್ಕಾರಿ ಪ್ರೌಢ ಶಾಲೆಯಲ್ಲಿ ೬ ಹಾಗೂ ಅನುದಾನಿತ ಪ್ರೌಢ ಶಾಲೆಯಲ್ಲಿ ಒಟ್ಟು ೪ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ.

ವೀರಾಜಪೇಟೆ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೧೮, ಸರ್ಕಾರಿ ಪ್ರೌಢ ಶಾಲೆಗಳಲ್ಲಿ ೨ ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ ೫ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ.