ವೀರಾಜಪೇಟೆ, ಸೆ. ೧: ಜಾತಿ, ಧರ್ಮ, ಕುಲ, ಗೋತ್ರ, ಬೇಧ, ಬಾವ ಇದ್ಯಾವುದನ್ನು ದೇವರು ಸೃಷ್ಠಿ ಮಾಡಿದಲ್ಲ. ಸ್ವಾರ್ಥಕ್ಕಾಗಿ ಮನುಷ್ಯರ ಸೃಷ್ಠಿಸಿದ್ದು ಇವೆಲ್ಲವು ಈ ಸಮಾಜದಲ್ಲಿ ಕಾಲ್ಪನಿಕ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಟ್ಟಿ ಗ್ರಾಮದಲ್ಲಿರುವ ಬಿಲ್ಲವ ಸೇವಾ ಸಮಾಜದ ವತಿಯಿಂದ ನಡೆದ ಶೈಕ್ಷಣಿಕ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿಯೇ ಮುಂದುವರೆದ ಜಿಲ್ಲೆಯಾದ ಕೇರಳದಲ್ಲಿ ೧೮೦೦ನೇ ಇಸವಿಯಲ್ಲಿ ಶ್ರೀ ನಾರಾಯಣ ಗುರುಗಳು ಜಾತಿ ಪದ್ಧತಿ, ಅಸ್ಪೃಶ್ಯತೆ ವಿರುದ್ಧ ಶಾಂತಿಯುತ ಹೋರಾಟ ನಡೆಸಿ ಎದೆಗಾರಿಕೆ ತೋರಿದವರು. ಆದರು ಇಂದಿಗೂ ಜಾತಿ ತಾರತಮ್ಯ ಪದ್ಧತಿ ದೂರವಾಗಿಲ್ಲ. ಸಭೆ ಸಮಾರಂಭಗಳು ಮುಗಿಸಿ ಮನೆಗೆ ತೆರಳಿದರೆ ಅದೇ ಜಾತಿ ವ್ಯವಸ್ಥೆ ಮುಂದುವರೆಯುತ್ತಿದೆ. ನಾವು ನಮ್ಮ ಮಕ್ಕಳನ್ನು ಜಾತಿ ವ್ಯವಸ್ಥೆಯಿಂದ ದೂರ ಇಟ್ಟು ಸಮಾಜದಲ್ಲಿ ಎಲ್ಲಾ ಜಾತಿ ವರ್ಗದವರು ಸಮಾನರು ಎಂದು ತಿಳಿ ಹೇಳುವ ಕೆಲಸ ಆಗಬೇಕು ಎಂದು ಕರೆ ನೀಡಿದರು.
ಹಿಂದಿನ ಕಾಲದ ಶಿಕ್ಷಣಕ್ಕೂ ಇಂದಿನ ಕಾಲದ ವಿದ್ಯಾಭ್ಯಾಸಕ್ಕೂ ವ್ಯತ್ಯಾಸ ಇದೆ. ಇಂದಿನ ವಿದ್ಯಾರ್ಥಿ ಜೀವನ ಒತ್ತಡದ ವಿದ್ಯಾಭ್ಯಾಸವಾಗಿದೆ. ಒತ್ತಡದ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಪೋಷಕರು ನಡೆದು ಕೊಳ್ಳಬೇಕಿದೆ. ಮಕ್ಕಳ ಯೋಗಕ್ಷೇಮ ಹಾಗೂ ಅವರ ಶ್ರೇಯೋಭಿವೃದ್ಧಿ ಪೋಷಕರ ಕರ್ತವ್ಯವಾಗಿದೆ ಎಂದು ಕಿವಿಮಾತು ನುಡಿದರು.
ಹಿಂದುಳಿದ ವರ್ಗಗಳ ಇಲಾಖೆ ಮೂಲಕ ಹಿಂದಿನ ಸರ್ಕಾರ ಸಮುದಾಯ ಭವನ ನಿರ್ಮಾಣ ಮಾಡಲು ರೂ. ೫೦ ಲಕ್ಷ ಮಂಜೂರು ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ಬಿಲ್ಲವ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ. ಗಣೇಶ ಮಾತನಾಡಿದರು.
ಇದೇ ಸಂದರ್ಭದಲ್ಲಿ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಕಳೆದ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಕ್ಷಯ್ ಬಿ.ಎಸ್, ರಕ್ಷಾ ಬಿ.ಪಿ., ತನ್ಮಯಿ ಕರ್ಕೇರಾ, ನಿಹಾಲ್ ಬಿ.ಡಿ., ಅರ್ಚನಾ ಬಿ.ಎಸ್., ಆದರ್ಶ್ ಬಿ.ಕೆ., ದೀಪಿಕಾ ಬಿ.ಎಸ್., ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕೃತಿಕಾ, ಶರಣ್, ಜಗದೀಶ್, ಶೀಲಾವತಿ, ಸಂಶಿತಾ, ಅಂಕಿತಾ ಕಾವ್ಯ, ಸಚಿನ್, ಶಮ ಸೋಮಪ್ಪ ಅವರುಗಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಡಿ. ಮುಕುಂದ, ಸಂಘದ ಗೌರವ ಅಧ್ಯಕ್ಷ ಚಂದ್ರಶೇಖರ್ ರಾಜ, ಕಾರ್ಯದರ್ಶಿ ಬಿ.ಆರ್. ಜನಾರ್ಧನ್, ಬಿ.ಎಸ್. ನಾರಾಯಣ್ ಹಳ್ಳಿಗಟ್ಟು ಉಪಸ್ಥಿತರಿದ್ದರು.
ಬಿ.ಡಿ. ಪ್ರೇಮ ಸ್ವಾಗತಿಸಿ, ಬಿ.ಎಂ. ಸತೀಶ್ ಕಾರ್ಯಕ್ರಮ ನಿರೂಪಿಸಿದರು.