ಪೊನ್ನಂಪೇಟೆ, ಸೆ. ೧: ೨೦೨೨-೨೩ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಲಾ ಓರ್ವ ಸಾಧಕ ವಿದ್ಯಾರ್ಥಿಗೆ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕಳೆದ ವರ್ಷದಂತೆ ಈ ಬಾರಿಯೂ ‘ವಿಶೇಷ ಪ್ರತಿಭಾ ಪುರಸ್ಕಾರ-೨೦೨೨' ನೀಡಿ ಗೌರವಿಸಲು ಕೆ.ಎಂ.ಎ. ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಈ ಕುರಿತ ತೀರ್ಮಾನವನ್ನು ಕಳೆದ ಕಾರ್ಯಕಾರಿ ಸಮಿತಿ ಸಭೆ ಒಮ್ಮತದಿಂದ ಅಂಗೀಕರಿಸಿದೆ.

ಈ ವಿಶೇಷ ಪ್ರತಿಭಾ ಪುರಸ್ಕಾರವನ್ನು ಮುಂಬೈನಲ್ಲಿ ಉದ್ಯಮಿಯಾಗಿರುವ ಮತ್ತು ಎನ್.ಸಿ.ಟಿ. ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ‘ಅಕ್ಕಳತಂಡ ಎಸ್. ಮೊಯಿದು ಅವರು ತಮ್ಮ ದಿವಂಗತ ಸಹೋದರರಾದ ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥ' ಕಳೆದ ಸಾಲಿನಿಂದ ಪ್ರಾಯೋಜಿಸಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸಲು ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ದುದ್ಧಿಯಂಡ ಹೆಚ್. ಸೂಫಿ ಹಾಜಿ ತಿಳಿಸಿದ್ದಾರೆ.

ಈ ವಿಶೇಷ ಪ್ರತಿಭಾ ಪುರಸ್ಕಾರವು ರೂ. ೧೦,೦೦೦ ನಗದು ಬಹುಮಾನ ಸೇರಿದಂತೆ ಆಕರ್ಷಕ ಸ್ಮರಣಿಕೆ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿರುತ್ತದೆ. ಮುಂದಿನ ತಿಂಗಳ ೨೪ ರಂದು ವೀರಾಜಪೇಟೆಯ ಸೆಂಟ್ ಆನ್ಸ್ ಪ್ಯಾರಿಸ್ ಹಾಲ್‌ನಲ್ಲಿ ಆಯೋಜಿಸಲಾಗಿರುವ ‘ಕೆ.ಎಂ.ಎ. ಪ್ರತಿಭಾ ಪುರಸ್ಕಾರ-೨೦೨೩' ವಿತರಣಾ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಈ ವಿಶೇಷ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು